ವೇಮಗಲ್ : ಜಿಲ್ಲೆಯಲ್ಲಿ 10 ವರ್ಷ ವರ್ತೂರು ಪ್ರಕಾಶ್ ಶಾಸಕರಾಗಿದ್ದರು. ಜತೆಗೆ ಸಚಿವರಾಗಿದ್ದರು. ಸಿ.ಎಸ್. ವೆಂಕಟೇಶ್ ಜಿಪಂ ಅಧ್ಯಕ್ಷರಾಗಿದ್ದರು. ಅಂದು ಸುಮ್ಮನೆ ಇದ್ದು, ಈಗ ಚುನಾವಣೆಗಾಗಿ ರಾಜಕೀಯ ಗಿಮಿಕ್ ಮಾಡಲು ಬಂದಿದ್ದಾರೆ, ಮತದಾರರು ಅಂತಹವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಕೋಲಾರ ತಾಲೂಕಿನ ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ವಾರ್ಡ್ವಾರು ಸಭೆಗಳಲ್ಲಿ ಮಾತನಾಡಿದರು. ಮಾಜಿ ಸಚಿವರಾದಿಯಾಗಿ ಎಲ್ಲರಿಗೂ ಅಭಿವೃದ್ಧಿ ಬೇಕಾಗಿಲ್ಲ. ದುಡ್ಡು ಮಾಡಬೇಕು ಅಂತ ಕ್ಷೇತ್ರಕ್ಕೆ ಬಂದಿದ್ದಾರೆ. ಅವರ್ಯಾರೂ ನಮ್ಮ ಜಿಲ್ಲೆಯವರಲ್ಲ, ಆದರೂ ಜನ ಅವಕಾಶ ಕೊಟ್ಟಿದ್ದರು. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲಿಲ್ಲ. ಇವರು ಕೆಂಪು ಇರುವೆಗಳು ಇದ್ದಂತೆ, ಮೈಮೇಲೆ ಬಿಟ್ಟುಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ ವರ್ಷದೊಳಗೆ ಪ್ರತಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ. ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಉಸ್ತುವಾರಿ ಸಚಿವರು 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಹಂತ ಹಂತವಾಗಿ ಪ್ರಗತಿ ಮಾಡಲಾಗುವುದು ಎಂದರು. ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಬಡವರ ಪರ ಸರ್ಕಾರವಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಗಳಲ್ಲಿ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಭೆ ಮಾಡಿ ನಿವೇಶನ, ಮನೆ ರಹಿತರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗುವುದು. ಜನರ ಸಮಸ್ಯೆ ಪರಿಹಾರ ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಪಪಂ ಚುನಾವಣೆ ವೇಳೆ ಬಂಡವಾಳಶಾಹಿಗಳು ಬಂದು ವ್ಯಾಪಾರ ಮಾಡಿ ರಾಜಕೀಯ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಅಧಿಕಾರ ಇದ್ದಾಗ ಜೆಡಿಎಸ್&ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನೆ ಮಾಡಬೇಕು. ಸುಳ್ಳು ಹೇಳಿಕೊಂಡು ಜನರನ್ನು ಯಾಮಾರಿಸುವ ಮೈತ್ರಿ ಅಭ್ಯರ್ಥಿಗಳನ್ನು ದೂರವಿಡಬೇಕು ಎಂದರು. ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಕಾಂಗ್ರೆಸ್ ಶಾಸಕರು, ಎಂಎಲ್ಸಿ,
ಉಸ್ತುವಾರಿ ಸಚಿವರೂ ಇದ್ದು, ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೊಟ್ಟ ಮಾತಿನಂತೆ ಅಭಿವೃದ್ಧಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಬಡವರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಮುಖಂಡ ಗೌತಮ್, ಗ್ಯಾರಂಟಿ ಯೋಜನಗೆಗಳ ಸಮಿತಿ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ವೆಂಕಟರಾಜು, ಕುಮಾರ್, ಮಂಜುಳಾ ಮುನಿರಾಜು, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಉರಟಾಗ್ರಹಾರ ಚೌಡರೆಡ್ಡಿ, ಉದಯಶಂಕರ್, ಯಲವಾರ ರಾಜಕುಮಾರ್, ರತ್ನಮ್ಮ ಇದ್ದರು.