ಕೋಲಾರ: ಕೋಲಾರ ಹಾಲು ಒಕ್ಕೂಟಕ್ಕೆ ಜೂ.25ರಂದು ನಿಗದಿಯಾಗಿರುವ ಚುನಾವಣೆ ಪ್ರತಿಷ್ಠಿತ ಕಣವಾಗಿದ್ದು, ಘಟಾಣಿಘಟಿಗಳ ರಾಜಕಾರಣಗಳು ಸ್ಪರ್ಧೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಾಗವಾದ ನಂತರ ಕೋಲಾರ ಜಿಲ್ಲೆಗೆ ಸೀಮಿತವಾಗಿರುವ ಕೋಮುಲ್ಗೆ 13 ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಲಾಗಿದ್ದು, 2 ಕ್ಷೇತ್ರಗಳಲ್ಲಿ ಮಹಿಳಾ ಹಾಲು ಒಕ್ಕೂಟಗಳಿಂದ ಆಯ್ಕೆ ಆಗುವುದಕ್ಕೆ ಮೀಸಲಿಟ್ಟಿದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಕೆಜಿಎಫ್ ಮತ್ತು ಬಂಗಾರಪೇಟೆಗೆ ತಲಾ 1 ಸ್ಥಾನ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ತಲಾ 2 ಸ್ಥಾನ, ಕೋಲಾರಕ್ಕೆ 3 ಸ್ಥಾನಗಳನ್ನು ನೀಡಿದ್ದಾರೆ.
ಈಗಾಗಲೇ ಸ್ಥಳಿಯ ಹಾಲು ಒಕ್ಕೂಟದಿಂದ ಚುನಾವಣೆಗೆ ಮತ ಚಲಾವಣೆ ಮಾಡಲು ಡೆಲಿಗೇಶನ್ ಪಡೆಯುವತ್ತ ಮುಂದಾಗಿದ್ದಾರೆ.
ಕಳೆದ 5 ವರ್ಷಗಳಿಂದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿರ್ದೇಶಕರಾಗಿ ಕೋಚಿಮುಲ್ ಅಧ್ಯಕ್ಷರಾಗಿದ್ದರು. ಕೋಚಿಮುಲ್ ವಿಂಗಡಣೆ ನಂತರ ಕೋಮುಲ್ಗೆ ಮಾಲೂರಿನಿಂದ ಸ್ಪರ್ಧೆ ಮಾಡಲು ಮುಂದಾಗಿದ್ದರು. ಕೋಮುಲ್ನಿಂದ ನಿರ್ದೇಶಕರಾಗಿ ಆಯ್ಕೆ ಆಗಿ ಕೆಎಂಎಫ್ಗೆ ನಿರ್ದೇಶಕರಾಗಿ ಹೋಗಿ ಕೆಎಂಎಫ್ ಅಧ್ಯಕ್ಷರಾಗಲು ಚಿಂತನೆ ನಡೆಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಬಾರಿ ಕೋಮುಲ್ ಪ್ರವೇಶ ಮಾಡಲು ಬೂದಿಕೋಟೆಯ ನಲ್ಲಹಳ್ಳಿ ಹಾಲು ಒಕ್ಕೂಟದಿಂದ ಡೆಲಿಗೇಶನ್ ಪಡೆದಿದ್ದು, ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಒಂದೇ ಪಕ್ಷದ ಶಾಸಕರಾಗಿದ್ದು, ಕೋಚಿಮುಲ್ನಲ್ಲಿ ನಡೆಯಲಿರುವ ಹಗರಣವನ್ನು ಬಯಲಿಗೆಳೆಯಬೇಕೆಂದು ಬಹಿರಂಗವಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಕಳೆದ 5 ವರ್ಷಗಳಿಂದ ಕೋಚಿಮುಲ್ನ್ನು ಬಹಳಷ್ಟು ಹಗರಣಗಳು ನಡೆದಿವೆ ಎಂದು ಆರೋಪಿಸುತ್ತಿದ್ದಾರಲ್ಲದೆ ಬಹಿರಂಗವಾಗಿ ನಂಜೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಚುನಾವಣೆಗೆ ಕೋಮುಲ್ ಆಡಳಿತಾಧಿಕಾರಿ ಸಿದ್ಧತೆ ಕೈಗೊಳ್ಳುತ್ತಿದ್ದು, ಡೆಲಿಗೇಶನ್ ಮುಗಿದ ನಂತರ ಆಯಾ ತಾಲೂಕುಗಳಲ್ಲಿ ಪರಿಶೀಲನೆ ನಡೆಸಿ ಮತದಾರರ ಪಟ್ಟಿ ತಯಾರಿಸಲು ಮುಂದಾಗಲಿದ್ದಾರೆ. ಕೋಮುಲ್ ನಿರ್ದೇಶಕಕರ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕಾದರೆ ಸ್ಥಳಿಯ ಹಾಲು ಒಕ್ಕೂಟಗಳಿಂದ ಡೆಲಿಗೇಶನ್ ಪಡೆದವರಿಗೆ ಮಾತ್ರ ಅವಕಾಶ ಇದೆ.
ಜಿದ್ದಾಜಿದ್ದಿ
ಕಳೆದ ಬಾರಿ ನಿರ್ದೇಶಕರಾಗಿದ್ದವರು ಮತ್ತೆ ಚುನಾವಣೆಗೆ ತಯಾರಾಗಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಒಂದೊಂದು ತಾಲೂಕಿಗೆ ಒಬ್ಬೊಬ್ಬರು ಮಾತ್ರ ನಿರ್ದೇಶಕರಾಗಿ ಆಯ್ಕೆ ಆಗಲು ಅವಕಾಶವಿತ್ತು. ಈ ಬಾರಿ ಕೋಚಿಮುಲ್ ವಿಂಗಡಣೆಯಾದ ನಂತರ ನಿರ್ದೇಶಕರ ಸಂಖ್ಯೆ ಹೆಚ್ಚಾದ ಕಾರಣ ಕೆಲವು ತಾಲೂಕುಗಳಲ್ಲಿ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಲು ಅವಕಾಶವಿದೆ. ಕೋಲಾರದಲ್ಲಿ 3 ನಿರ್ದೇಶಕರಾಗಿ ಆಯ್ಕೆ ಆಗಲು ಅವಕಾಶವಿರುವುದರಿಂದ ಈಗಾಗಲೇ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಿರುವ ಅಧ್ಯಕ್ಷರು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಹೊಸದಾಗಿ ಬಂಗಾರಪೇಟೆಯಿಂದ ಶಾಸಕ ನಾರಾಯಣಸ್ವಾಮಿ ಪ್ರವೇಶಿಸಿದರೆ, ಕೋಲಾರ ತಾಲೂಕಿನ 3 ಕ್ಷೇತ್ರಗಳಿಂದ ಘಟಾನುಘಟಿ ರಾಜಕಾರಣಿಗಳು ಪ್ರವೇಶ ಮಾಡಲು ಸಾಧ್ಯತೆಗಳಿವೆ. ಕ್ಷೇತ್ರ ವಿಂಗಡಣೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಮೊರೆ ಹೋಗಿರುವುದರಿಂದ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡುವಂತಾಗಿದೆ.