ಜಿಲ್ಲೆ

ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ನಡೆಯಿತು. ಪ್ರತಿವರ್ಷ ಆಟಿ ಅಮಾವಾಸ್ಯೆ ದಿನ ಈ ಉತ್ಸವ ಆಚರಿಸಿಕೊಂಡು ಬರುವುದು ಸ್ಥಳೀಯ ಸಂಪ್ರದಾಯವಾಗಿದೆ.

ಉತ್ಸವದ ಹಿನ್ನೆಲೆಯಲ್ಲಿ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ ಪೂಜೆ ಸಲ್ಲಿಸಿ, ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ ಹಾಕಿ ವಿಶೇಷ ಪೂಜೆ ನೆರವೇರಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ನಡೆಸಲಾಯಿತು.

ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿದಿವಿಧಾನಗಳನ್ನು ನೆರವೇರಿಸಿ ಬಾಳೆದಿಂಡಿನ ಮಂಟಪವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು. ಮೊದಲೆಲ್ಲಾ ಆಷಾಢ ಮಾಸದಲ್ಲಿ ವ್ಯಾಪಕ ಮಳೆಯಾಗುತ್ತಿತ್ತು. ಈ ಮಳೆಯಿಂದ ಜೀವಕ್ಕೆ ಹಾನಿಯಾಗದಂತೆ ಕಾವೇರಿ ಮಾತೆಗೆ ಪ್ರಾರ್ಥಿಸಲು ಈ ವಿಶೇಷ ಆಚರಣೆ ನಡೆಸಲಾಗುತ್ತದೆ ಎನ್ನುವುದು ಆಸ್ತಿಕರ ನಂಬಿಕೆಯಾಗಿದೆ.

ತಲಕಾವೇರಿ ತಕ್ಕ ಕೋಡಿ ಮೋಟಯ್ಯ, ಭಾಗಮಂಡಲ ತಕ್ಕ ಬಳ್ಳಡ್ಕ ಅಪ್ಪಾಜಿ, ಪ್ರಧಾನ ಅರ್ಚಕ ಹರೀಶ್ ಭಟ್ ಸೇರಿದಂತೆ ದೇವಾಲಯದ ಅರ್ಚಕರು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಸೇರಿದ್ದರು.