ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳ ಪಡುವ 7 ಕಡೆಯಲ್ಲಿರುವ ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಯಿತು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆದ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ದಿನದ ಮಹತ್ವದ ಕುರಿತು ಮಾತನಾಡಿದರು.
ರೋಟರಿ ಸದಸ್ಯರಾದ ಎ.ಜಿ.ವಿಜಯ್, ಎಚ್.ಇ.ಕಿರಣ್, ಆಸ್ಪತ್ರೆಯ ಆರೋಗ್ಯ ಪರಿವೀಕ್ಷಕ ಪ್ರವೀಣ್‌ಕುಮಾರ್, ಆರೋಗ್ಯ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ನಂತರ ಮಕ್ಕಳಿಗೆ ಲಸಿಕೆ ಹಾಕಲಾಯಿತು.
ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳ ಪಡುವ ಮಾಲಂಬಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಲೂರು ಸಿದ್ದಾಪುರ ಗ್ರಾಪಂ ಸದಸ್ಯ ಪಿ.ಎನ್.ಗಂಗಾಧರ್ ಉದ್ಘಾಟಿಸಿದರು. ನಂತರ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಲಸಿಕಾ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಅನುಷಾ, ಅಂಗನವಾಡಿ ಶಿಕ್ಷಕಿ ಕಾವ್ಯಾ, ಆಶಾ ಕಾರ್ಯಕರ್ತೆ ಮೀನಾಕ್ಷಿ, ಆಕಾಶ್ ಮತ್ತಿತರರಿದ್ದರು.