ರಾಯಲ್ಪಾಡು: ಉತ್ತಮ ಆರೋಗ್ಯವೇ ನಮ್ಮ ಎಲ್ಲ ಕಾರ್ಯಚಟುವಟಿಕೆಗಳ ಸಮಗ್ರ ಯಶಸ್ಸಿಗೆ ತಳಪಾಯ ಎಂಬುದನ್ನು ಎಲ್ಲರೂ ಪ್ರತ್ಯಕ್ಷ ಪ್ರಕರಣಗಳಿಂದ ಅರ್ಥ ಮಾಡಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಜಗದೀಶ್ ಹೇಳಿದರು.
ರಾಯಲ್ಪಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಕಲ ಸಂಪತ್ತು, ಸೌಭಾಗ್ಯ ಎಂಬುದನ್ನು ಪ್ರಪಂಚ ಇತ್ತೀಚೆಗೆ ಅರಿತುಕೊಳ್ಳುತ್ತಿದೆ. ಪಲ್ಸ್ ಪೋಲಿಯೋ ಹಾಗೂ ಕರೊನಾ ವೈರಸ್ ತಡೆಗಟ್ಟಲು ಲಸಿಕೆಯೊಂದೆ ಮಾರ್ಗ ಎಂಬುದನ್ನು ತೋರಿಸಿಕೊಟ್ಟಿದ್ದು ಸಾರ್ವಜನಿಕರು ಇಂತಹ ರೋಗಳ ಬಗ್ಗೆ ಜಾಗೃತರಾಗುವಂತೆ ಸಲಹೆ ನೀಡಿದರು.
ಸರ್ಕಾರವು ಇತ್ತೀಚಿಗೆ ರಾಜ್ಯದಲ್ಲಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಮಾದರಿ ಪಿಎಚ್‌ಸಿ ಮಾಡುವ ಯೋಜನೆಯನ್ನು ಜಾರಿಗೆ ತರುತ್ತಿದೆ. ಅದರಂತೆ ವಿಶೇಷವಾಗಿ ಗಡಿ ಗ್ರಾಮವಾದ ರಾಯಲ್ಪಾಡು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಮಾದರಿ ಪಿಎಚ್‌ಸಿ ಕೇಂದ್ರವಾಗಿ ಮಾಡುವುದಾಗಿ ಭರವಸೆ ನೀಡಿದರು.
ಮಾದರಿ ಪಿಎಚ್‌ಸಿಯಲ್ಲಿ 12ಬೆಡ್‌ಗಳು, 3 ವೈದ್ಯರು, 6 ಸ್ಟಾಫ್ ನರ್ಸ್‌ಗಳು ಕಾರ್ಯನಿರ್ವಹಿಸಲಿದ್ದು, 24 ಗಂಟೆಗಳು ಸಾರ್ವಜನಿಕರಿಗೆ ಸೇವೆ ದೊರೆಯಲಿದೆ ಹಾಗೂ ವಸತಿ ಗೃಹಗಳು ನಿರ್ಮಾಣವಾಗಲಿದೆ ಎಂದು ವಿವರಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಚಂದನ್ ಮಾತನಾಡಿ, ಮಕ್ಕಳಲ್ಲಿ ಈ ಹಿಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣುಸುತ್ತಿದ್ದ ಪೋಲಿಯೋ ದಂತ ಮಾರಕ ರೋಗವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಂತ-ಹಂತವಾಗಿ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳತ್ತಾ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಈ ರೋಗವು ಹತೋಟಿಗೆ ಬಂದಿದೆ ಎಂದರು. 6 ಲಸಿಕಾ ಕೇಂದ್ರಗಳ ಮೂಲಕ ಶೇ. 94 ಲಸಿಕೆ ಹಾಕಲಾಗಿದೆ. ಟಿಎಚ್‌ಒ ವಿಜಯಮ್ಮ, ವೈದ್ಯಾಧಿಕಾರಿ ಸಂತೋಷ್, ಸಿಬ್ಬಂದಿ ಮಂಜುಳಾ, ಜಿ.ಎಸ್.ನಾಗರಾಜ್, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಆಶಾ ಕಾರ್ಯಕರ್ತೆ ಮಂಜುಳಾ ಇತರರು ಇದ್ದರು.