ಮಂಗಳೂರು : ಪೊಲೀಸರಿಗೆ ಅತೀ ಅಗತ್ಯವಾಗಿರುವ ದೈಹಿಕ ಕ್ಷಮತೆ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸಿ ಸಮಾಜದಲ್ಲಿ ಸಾರ್ವಜನಿಕ ಸೇವೆಯಲ್ಲಿ ಉತ್ಕೃಷ್ಟತೆ ಸಾಧಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಮತ್ತು ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಬುಧವಾರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಗೆ ಆಯೋಜಿಸಲಾಗಿದ್ದ ಒತ್ತಡ ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪೊಲೀಸರು ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲಿಯೂ ಮಹಿಳಾ ಅಧಿಕಾರಿ, ಸಿಬಂದಿಗೆ ಕುಟುಂಬದ ಜವಾಬ್ದಾರಿ ಹೆಚ್ಚು ಇರುವುದರಿಂದ ಕರ್ತವ್ಯ ಸಂದರ್ಭ ಒತ್ತಡಕ್ಕೊಳಗಾಗುತ್ತಾರೆ. ಅವರು ಒತ್ತಡ ಮುಕ್ತರಾಗಿ ಮತ್ತಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು. ಅದಕ್ಕೆ ಪೂರಕವಾಗಿ ಮಂಗಳೂರು ಪೊಲೀಸ್ ಕಮಿಷನರೆಟ್‌ನ ಸುಮಾರು 110 ಮಂದಿ ಅಧಿಕಾರಿ/ಸಿಬಂದಿಗೆ ಒತ್ತಡ ನಿವಾರಣೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಿಂದ ಪೊಲೀಸರು ಒತ್ತಡ ನಿವಾರಣಾ ಚಟುವಟಿಕೆ, ತಂತ್ರ ಅರಿತು ಅದನ್ನು ಅಳವಡಿಸಿಕೊಂಡು ಅದರ ಪ್ರಯೋಜನ ಉತ್ತಮ ಕರ್ತವ್ಯದ ರೂಪದಲ್ಲಿ ಸಾರ್ವಜನಿಕರಿಗೆ ದೊರೆಯುವಂತಾಗಬೇಕು ಎಂಬುದು ಕಾರ್ಯಾಗಾರ ಆಯೋಜನೆಯ ಉದ್ದೇಶವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಧ್ಯಾನಕ್ಕೆ ಸಮಯ ಮೀಸಲಿಡಿ
ಆರ್ಟ್ ಆಫ್ ಲಿವಿಂಗ್‌ನ ತರಬೇತುದಾರ ಅಜಯ್ ಕುಮಾರ್ ಅವರು ಮಾತನಾಡಿ, ದಿನದ 10 ನಿಮಿಷವನ್ನಾದರೂ ಧ್ಯಾನಕ್ಕೆ ಮೀಸಲಿಡಬೇಕು. ಪ್ರಾಣಾಯಾಮ ಕೂಡ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಪರಿವರ್ತನೆಗೆ ಪ್ರತಿ ವ್ಯಕ್ತಿಯ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಮಾಜದ ರಕ್ಷಣೆಯ ಜವಾಬ್ಧಾರಿ ಹೊತ್ತಿರುವ ಪೊಲೀಸರು ಮಾನಸಿಕವಾಗಿ ಒತ್ತಡ ರಹಿತರಾಗಿದ್ದರೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂದರು.
ಆರ್ಟ್ ಆಫ್ ಲಿವಿಂಗ್‌ನ ತರಬೇತುದಾರೆ ರಶ್ಮಿ, ಡಿಸಿಪಿಗಳಾದ ಅನ್ಶು ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.