ಜಿಲ್ಲೆ

ಮನೆ ಮನೆಗೆ ಪೊಲೀಸ್ ವಿಸಿಟ್ : ಯೋಜನೆ ಹಿಂದೆ ಜನಸ್ನೇಹಿ ವ್ಯವಸ್ಥೆ ರೂಪು ಉದ್ದೇಶ : ವಿಶ್ವಾಸ, ಸುರಕ್ಷತೆ, ನೇರ ಸಂಪರ್ಕ ಗುರಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಿಮ್ಮ ಮನೆಗೂ ಪೊಲೀಸರು ಬರಲಿದ್ದಾರೆ, ಹಾಗೆಂದು ಭಯಪಡಬೇಕಿಲ್ಲ!

- ಇದು ಕರ್ನಾಟಕ ಸರ್ಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ಮಹತ್ತರ ಉದ್ದೇಶ ಹೊಂದಿದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯ ಭಾಗ.

ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ, ಸುರಕ್ಷತೆ ಮತ್ತು ನೇರ ಸಂಪರ್ಕ ಹೆಚ್ಚಿಸುವ ಗುರಿ ಹೊಂದಿರುವ ಈ ಯೋಜನೆ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಮೊದಲ ಬಾರಿಗೆ ಪೊಲೀಸರು ಪ್ರತೀ ಮನೆಗೂ ಬರುವ ಈ ಯೋಜನೆಯನ್ನು ರಾಜ್ಯ ಸರ್ಕಾರ ವಿನ್ಯಾಸ ಮಾಡಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಸಹಾಯವಾಗಲಿದೆ.

ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧ ಬೆಸೆದುಕೊಳ್ಳಲು ಅನುಕೂಲಕ ವಾತಾವರಣ ನಿರ್ಮಾಣವಾಗುತ್ತದೆ. ಸ್ಥಳೀಯರಿಂದ ಸೂಕ್ಷ್ಮಮಾಹಿತಿ ಸಂಗ್ರಹ, ಅಪರಾಧ ತಡೆ ಹಾಗೂ ಅಪರಾಧ ಪ್ರಕರಣಗಳ ಪರಿಣಾಮಕಾರಿ ಪತ್ತೆ ಸಾಧ್ಯವಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವ, ಪೊಲೀಸ್ ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಪೊಲೀಸ್ ಸೇವೆ ಒದಗಿಸುವುದು, ಪೊಲೀಸ್ ಪಡೆ ಮತ್ತು ನಿವಾಸಿಗಳ ನಡುವೆ ನೇರ ಸಂವಹನ ಉತ್ತೇಜಿಸುವುದು, ಸ್ಥಳೀಯ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಪ್ರೋತ್ಸಾಹಿಸುವುದು, ಪೊಲೀಸ್ ಸಿಬ್ಬಂದಿಯ ಪಾರದರ್ಶಕತೆ ಮತ್ತು ಸ್ಪಂದನಾಶೀಲತೆ ಹೆಚ್ಚಿಸುವುದು ಇದರ ಉದ್ದೇಶ.

ಜನರಲ್ಲಿ ಮಾಹಿತಿ ಕೊರತೆ

ಈ ಯೋಜನೆ ಕುರಿತು ಹೆಚ್ಚಿನ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಆದುದರಿಂದ ಪೊಲೀಸರು ಮನೆಗೆ ಬಂದಾಗ ಜನರು ಭಯಪಡುವ ಸ್ಥಿತಿ ಇದೆ. ಇದಕ್ಕಾಗಿ ಕೆಲವೆಡೆ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯರನ್ನು ಪೊಲೀಸರು ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ತೀರಾ ಹಳ್ಳಿ ಪ್ರದೇಶಗಳಲ್ಲಿ ಈ ವಿಚಾರವನ್ನು ತಿಳಿಹೇಳಲು ಹೆಚ್ಚು ಸಮಯ ಬೇಕಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಸರಿಯಾದ ಮಾಹಿತಿ ನೀಡುವ ಅಗತ್ಯವಿದೆ.

ಪೊಲೀಸರು ಏನು ಕೇಳುತ್ತಾರೆ?

ಸಮಾಜದಲ್ಲಿ ಜನರು ಎದುರಿಸುತ್ತಿರುವ ಕಿರುಕುಳ, ಮಾದಕವಸ್ತು ಮಾರಾಟ ಬಗ್ಗೆ ಅನುಮಾನಗಳು ಅಥವಾ ಮಕ್ಕಳ ಮೇಲಿನ ದೌರ್ಜನ್ಯದಂತಹ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಈ ಉಪಕ್ರಮದಿಂದ ಸಾಧ್ಯ. ಸ್ಥಳದಲ್ಲಿ ಹೊಸಬರ ಬಗ್ಗೆ ಅಥವಾ ಏಕಾಂಗಿಯಾಗಿರುವ ನೆರೆಹೊರೆಯವರ ಬಗ್ಗೆಯೂ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪೊಲೀಸರು ಮಾಡಲಿದ್ದಾರೆ. ಅಗತ್ಯವಿದ್ದರೆ ಸಾರ್ವಜನಿಕರು ಕರ್ತವ್ಯನಿರತ ಪೊಲೀಸ್ ಕಾನ್‌ಸ್ಟೆಬಲ್‌ಗಳ ಸಹಾಯದಿಂದ ದೂರನ್ನೂ ದಾಖಲಿಸಬಹುದು.

ಸರ್ಕಾರದ ‘ಮನೆ ಮನೆಗೆ ಪೊಲೀಸ್ ಯೋಜನೆ’ ಅನ್ವಯ ದ.ಕ.ಜಿಲ್ಲೆಯಲ್ಲಿ ಪೊಲೀಸರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಜನಸಾಮಾನ್ಯರು ತಮ್ಮ ಪರಿಸರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಈ ಯೋಜನೆ ಅವಕಾಶ ಕಲ್ಪಿಸಿದೆ. ಸಾರ್ವಜನಿಕರ ಸಹಕಾರ ಅಗತ್ಯ. ಡಾ.ಅರುಣ್ ಕೆ., ಎಸ್ಪಿ ದ.ಕ ಜಿಲ್ಲೆ