ಜಿಲ್ಲೆ

ಪೊಲೀಸರ ವಾಹನ ಅಪಘಾತ: ತಿಮ್ಮಪ್ಪನ ಭಕ್ತರಿಂದ ಸಹಾಯ; ಗಾಯಾಳು ಪಿಎಸ್​ಐ ಬೆಂಗಳೂರಿಗೆ ಶೀಘ್ರ ಸ್ಥಳಾಂತರ

ಬೆಂಗಳೂರು: ಗಾಂಜಾ ಕಳ್ಳರನ್ನು ಹಿಡಿಯಲು ಆಂಧ್ರಪ್ರದೇಶಕ್ಕೆ ಹೋಗಿದ್ದ ಪೊಲೀಸರ ವಾಹನ ಅಲ್ಲಿ ಅಪಘಾತಕ್ಕೀಡಾಗಿ ಮೂವರು ಪೊಲೀಸರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಪ್ರೊಬೆಷನರಿ ಪಿಎಸ್​ಐ ಎಲ್. ದೀಕ್ಷಿತ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ.

ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರಪ್ರದೇಶಕ್ಕೆ ಟ್ರಾವೆಲ್ಸ್​​ವೊಂದರ ವಾಹನದಲ್ಲಿ ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸರು ತೆರಳಿದ್ದು, ಅವರ ಕಾರು ಚಿತ್ತೂರಿನ ಬಳಿ ಭೀಕರ ಅಪಘಾತಕ್ಕೀಡಾಗಿತ್ತು. ಪರಿಣಾಮ ಮೂವರು ಪೊಲೀಸ್​ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿವೆ.

ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿಈ ಅಪಘಾತ ನಡೆದಿದೆ. ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ನಡುವೆ ಈ ಸೇತುವೆ ಬರುತ್ತದೆ. ಪೊಲೀಸ್​ ಸಿಬ್ಬಂದಿ ಇದ್ದ ಇನ್ನೋವಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಮಾರು 30 ಅಡಿ ದೂರದ ಮತ್ತೊಂದು ರಸ್ತೆಗೆ ಹಾರಿಹೋಗಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ ಮತ್ತು ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ತೂರು ಜಿಲ್ಲಾ ಮುಖ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಬೆಂಗಳೂರಿನ ಶಿವಾಜಿನಗರದ ಸಬ್​ ಇನ್​ಸ್ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಪೊಲೀಸ್​ ಕಾನ್ಸ್​ಟೇಬಲ್​ ಅನಿಲ್ ಸೇರಿ ಆರು ಜನರ ತಂಡವು ಖಾಸಗಿ ಟ್ರಾವೆಲ್ಸ್​ನಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರಕ್ಕೆ ತೆರಳಿದ್ದರು. ಈ ವೇಳೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಸಬ್​ ಇನ್​ಸ್ಪೆಕ್ಟರ್ ಅವಿನಾಶ್, ಕಾನ್ಸ್​ಟೇಬಲ್​ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್​, ಕಾನ್ಸ್​ಟೇಬಲ್​ ಶರಣಬಸವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಎಸ್​ಐ ದೀಕ್ಷಿತ್, ಕೈ, ಕಾಲು ಮತ್ತು ಎದೆಗೆ ಗಂಭೀರ ಗಾಯವಾಗಿದೆ. ಅವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇನ್ನು ಕಾನ್‌ಸ್ಟೆಬಲ್​ ಶರಣಬಸವ ಅವರ ಮರ್ಮಾಂಗದ ಬಳಿ ಗಾಯವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ತಿಮ್ಮಪ್ಪನ ಭಕ್ತರಿಂದ ಸಹಾಯ

ಪೊಲೀಸರ ಕಾರು ಅಪಘಾತವಾದ ಸ್ಥಳವೇ ಗೊತ್ತಿರಲಿಲ್ಲ. ಪೊಲೀಸರ ಮೊಬೈಲ್​ಫೋನ್​ನಿಂದ ಗಾಯಾಳು ಕುಟುಂಬ ಸದಸ್ಯರಿಗೆ ದಾರಿಹೋಕರು ಕರೆ ಮಾಡಿದ್ದರು. ಆನಂತರ ಶಿವಾಜಿನಗರ ಪೊಲೀಸರಿಗೆ ಮತ್ತು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ, ಕೋಲಾರ ಎಸ್‌ಪಿ ದೇವರಾಜ್, ಡಿಸಿಪಿ ಭೀಮಾಶಂಕರ್ ಗುಳೇದ್‌ಗೆ ವಿಷಯ ಮುಟ್ಟಿಸಲಾಯಿತು.

ಆದರೆ, ಎಲ್ಲಿ ಅಪಘಾತವಾಗಿ ಎಂಬುದರ ಮಾಹಿತಿಯೇ ನಿಖರವಾಗಿ ತಿಳಿದಿರಲಿಲ್ಲ. ಅಷ್ಟರಲ್ಲಿ ತಿರುಪತಿಗೆ ಸಾಗುತ್ತಿದ್ದ ಭಕ್ತಾದಿಗಳು, ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಿ ಆ್ಯಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರು. ನಂಗಪಲ್ಲಿ ಎಸಿಪಿ ಶ್ರೀಲಕ್ಷ್ಮೀ ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡರು. ಇತ್ತ ದೇವರಾಜ್ ಮತ್ತು ಭೀಮಾಶಂಕರ್ ಗುಳೇದ್, ಗಾಯಾಳುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ವ್ಯವಸ್ಥೆ ಮಾಡಿದರು.