ಮಂಗಳೂರು: ರಾಜ್ಯದಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಆಧುನಿಕ ಸುಸಜ್ಜಿತ ಕಟ್ಟಡ ಹಾಗೂ ಪೊಲೀಸರಿಗೆ ವಾಸ ಮಾಡಲು ಡಬಲ್ ಬೆಡ್ ರೂಂ ಅಪಾರ್ಟ್‌ಮೆಂಟ್ ಮಾದರಿ ಮನೆ ನಿರ್ಮಾಣ ಮಾಡುವ ಯೋಜನೆ ಮುಂದುವರಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಘಟಕದ ಸಿ.ಎ.ಆರ್. ಕಚೇರಿ, ಬಜ್ಪೆ ಪೊಲೀಸ್ ಠಾಣೆ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳ ಒಟ್ಟು 9.50 ಕೋಟಿ ರೂ. ವೆಚ್ಚದ ನೂತನ ಕಟ್ಟಡಗಳನ್ನು ಭಾನುವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಕಳೆದ ಅವಧಿಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 100 ಪೊಲೀಸ್ ಠಾಣೆಗಳಿಗೆ ನೂತನ ಕಟ್ಟಡ ನಿರ್ಮಾಣ ಹಾಗೂ 20 ಸಾವಿರ ಮನೆ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು. ಈ ಪೈಕಿ 13 ಸಾವಿರ ಮನೆಗಳ ನಿರ್ಮಾಣ ಆಗಿದೆ. ನಾಲ್ಕೈದು ವರ್ಷಗಳಲ್ಲಿ ಶೇ.90ರಷ್ಟು ಪೊಲೀಸರಿಗೆ ಮನೆ ನಿರ್ಮಾಣ ಮಾಡಿ ಕೊಡುವ ಉದ್ದೇಶ ಹೊಂದಲಾಗಿದೆ ಎಂದರು.
ಇಲಾಖೆಗೆ ಸವಲತ್ತುಗಳನ್ನು ನೀಡಿದಾಗ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಟ್ಯಾಗ್ ಲೈನ್ ಹಾಕಿದ್ದೆವು. ಇಂದು ಸಮಾಜದಲ್ಲಿ ಶಾಂತಿ, ಸೌಹಾರ್ದವನ್ನು ಬಯಸುತ್ತೇವೆ. ಅಪರಾಧ ಪ್ರಮಾಣ ಇಳಿಕೆಯಾಗಿದೆ. ಆದರೆ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಎಲ್ಲಾ ಠಾಣೆಗಳಲ್ಲಿ ಸೈಬರ್ ಅಪರಾಧ ದಾಖಲಿಸಲು ಅವಕಾಶ ಮಾಡಿ ಕೊಡಲಾಗಿದೆ ಎಂದರು.
- ಹಿರಿಯ ಅಧಿಕಾರಿಗಳೇ ಟಾರ್ಗೆಟ್: ದಕ್ಷಿಣ ಕನ್ನಡದಲ್ಲಿ ಈ ಹಿಂದೆ ಅನೇಕ ದುರ್ಘಟನೆಗಳು ನಡೆದು ಹೋಗಿವೆ. ಸಮಾಜದ ಶಾಂತಿ ಕದಡಿದೆ. ಸಾವು ನೋವುಗಳಿಗೆ ಕಾರಣವಾಗಿದೆ. ಈ ಬಾರಿ ಠಾಣೆಗಳಿಗೆ ಭೇಟಿ ನೀಡಿ ಸಮಾಜದಲ್ಲಿ ಆಗು ಹೋಗುಗಳ ಮಾಹಿತಿ ಸಂಗ್ರಹಿಸಿ ಶಾಂತಿ ಕಾಪಾಡುವುದೇ ಇಲ್ಲಿನ ಹಿರಿಯ ಅಧಿಕಾರಿಗಳಿಗೆ ಟಾರ್ಗೆಟ್. ಇಲ್ಲದಿದ್ದರೆ ಅವರನ್ನೇ ಟಾರ್ಗೆಟ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ಸಚಿವರು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅತಿಥಿಯಾಗಿದ್ದರು. ಶಾಂತಿ, ಸೌಹಾರ್ದತೆಯ ಸಮಾಜ ನಿರ್ಮಾಣದಲ್ಲಿ ಪೊಲೀಸರ ಕೊಡುಗೆ ಅನನ್ಯ. ಅವರಿಗೆ ಸವಲತ್ತುಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿ. ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕಲ್ಪಿಸಿ ಕೊಡಬೇಕಾಗಿರುವುದು ಅವರ ಕರ್ತವ್ಯ. ಠಾಣೆಯಲ್ಲಿ ದಕ್ಷ ಅಧಿಕಾರಿಗಳಿದ್ದಾಗ ಎಲ್ಲಾ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಠಾಣೆಗಳಲ್ಲಿರುವ ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಬೇಕು. ಪೊಲೀಸರಿಗೆ ಅಪಾರ್ಟ್‌ಮೆಂಟ್ ವ್ಯವಸ್ಥೆ ಕಡಿಮೆ ಇದೆ. ಶಿಕ್ಷಣ ಸಂಸ್ಥೆಗಳು ಹೆಚ್ಚಿರುವುದರಿಂದ ಡ್ರಗ್ಸ್ ಪಿಡುಗು ಹೆಚ್ಚಾಗುತ್ತಿದ್ದು, ಕಡಿವಾಣ ಹಾಕಬೇಕಾಗಿದೆ. ರಾಜಕೀಯ ಒತ್ತಡ ಹೇರದೆ ಪೊಲೀಸರನ್ನು ಕೆಲಸ ಮಾಡಲು ಬಿಡಬೇಕಾಗಿದೆ. ಕಾನ್‌ಸ್ಟೇಬಲ್‌ಗಳಿಗೆ ಬ್ರಿಟೀಷರ ಕಾಲದ ಕ್ಯಾಪ್ ಬದಲಾಯಿಸಿದರೆ ಇನ್ನಷ್ಟು ಗೌರವ ನೀಡಿದಂತಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಉಮಾನಾಥ ಎ ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ಮುಖ್ಯ ಅಭಿಯಂತರ ಮಂಜುನಾಥ್ ಎಚ್., ಪಶ್ಚಿಮ ವಲಯ ಡಿಐಜಿಪಿ ಡಾ.ಚಂದ್ರಗುಪ್ತ, ಮಾಜಿ ಮೇಯರ್ ಭಾಸ್ಕರ ಕೆ., ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ಬಿ.ಪಿ. ಮೊದಲಾದವರಿದ್ದರು.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿದರು. ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ವಂದಿಸಿದರು. ಮೊಂಟೆಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪಪ್ರಾಂಶುಪಾಲ ಪ್ರೊ.ಸಂತೋಷ್ ರಾವ್ ಕಾರ್ಯಕ್ರಮ ನಿರೂಪಿಸಿದರು.