ಮೈಸೂರು: ಸಾರ್ವಜನಿಕರ ಸೇವೆಗಾಗಿಯೇ ಪೊಲೀಸ್ ಇಲಾಖೆ ಇದೆ. ಆದಕಾರಣ ಜನರೊಂದಿಗೆ ಪೊಲೀಸ್ ವರ್ತನೆ ಶಿಸ್ತುಬದ್ಧವಾಗಿರಬೇಕು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬರಬೇಕು ಎಂದು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು.
ಜ್ಯೋತಿನಗರದಲ್ಲಿರುವ ಮಹಿಳಾ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ 9ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳ ಬಗ್ಗೆ ಸ್ಪಂದನೆ ಇರಬೇಕು. ಹೆಣ್ಣು ಮಕ್ಕಳು ನಾವೇನು ಮಾಡಲು ಅಗುತ್ತದೆ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕಿ. ಕಾನೂನು ವ್ಯವಸ್ಥೆ ಕಾಪಾಡಲು, ಅಪರಾಧ ತಡೆಯಲು ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ ಆಗಬೇಕು ಎಂದು ಪ್ರೋತ್ಸಾಹಿಸಿದರು.
ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯದಲ್ಲಿ ತರಬೇತಿ ಅವಧಿಯಲ್ಲಿ ಮಾಸಿಕ 5 ಸಾವಿರ ರೂ. ಮಾತ್ರ ಭತ್ಯೆ ನೀಡಲಾಗುತ್ತಿದೆ. ಆದರೆ ನಮ್ಮ ಕರ್ನಾಟಕ ಸರ್ಕಾರ 45 ಸಾವಿರ ರೂ. ನೀಡುತ್ತಿದೆ. ಅದಕ್ಕಾಗಿ ನೀವು ಈ ನೆಲಕ್ಕೆ ಬದ್ಧರಾಗಿರಬೇಕು. ಹಣವನ್ನು ದುರುಪಯೋಗ ಮಾಡದೆ, ಉಳಿತಾಯದೊಟ್ಟಿಗೆ ಚೆನ್ನಾಗಿ ತಿಂದುಂಡು ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಸಲಹೆ ಮಾಡಿದರು.
ಸೈಬರ್ ಅಪರಾಧ ಪ್ರಮಾಣ ರಾಜ್ಯದಲ್ಲಿ ಶೇ.10 ಇದ್ದರೆ, ಬೆಂಗಳೂರಿನಲ್ಲಿ ಶೇ.30 ರಷ್ಟು ಅಗುತ್ತಿದೆ. ಸರಗಳ್ಳತನ, ದರೋಡೆ ಇತ್ತೀಚೆಗೆ ಕಡಿಮೆ ಆಗುತ್ತಿದ್ದು, ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಬೇಕು. ವಿಧಿವಿಜ್ಞಾನ ವಿಷಯವೂ ಇಂದು ಆದ್ಯತೆಯ ವಿಷಯವಾಗಿದ್ದು, ಆ ಬಗ್ಗೆ ಕೂಡ ಅರಿವು ಅಗತ್ಯ ಎಂದು ಸಲಹೆ ನೀಡಿದರು.
ಹೊರಾಂಗಣ ಮತ್ತು ಒಳಾಂಗಣದ ಬಗ್ಗೆ ಸಮನ್ವಯತೆ ಇರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಗುಂಪು ನಿಯಂತ್ರಣದ ಬಗ್ಗೆ ಅರಿವಿರಬೇಕು. ಪೊಲೀಸರಿಗೆ ಧೈರ್ಯ ಕೂಡ ಮುಖ್ಯ. ಆ ಸಲುವಾಗಿಯೇ ಬೈಕ್, ಸ್ಕೂಟರ್ ಓಡಿಸುವ ತರಬೇತಿ ಕೊಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಪಿಸ್ತೂಲ್ ಫೈರಿಂಗ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ನಿಮ್ಮ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳಿ ಎಂದರು.
ಮಹಿಳಾ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಗೀತಾ ಪ್ರಸನ್ನ, ಸೆಸ್ಕ್ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಹೂಗಾರ್, ಇನ್ಸ್‌ಪೆಕ್ಟರ್ ಕಿರಣ್ಕುಮಾರ್, ಡಿವೈಎಸ್ಪಿ ಶಂಕರೇಗೌಡ ಇತರರು ಇದ್ದರು.
======
ಆಯ್ಕೆಯಾದವರಲ್ಲಿ ಬಹುತೇಕ ಪದವೀಧರರು
ಮಹಿಳಾ ಪೊಲೀಸ್ ಪೇದೆ ಎಂದರೆ ಮೂಗು ಮುರಿಯುವ ಜನರ ಮಧ್ಯೆ ಬುನಾದಿ ಶಿಬಿರದಲ್ಲಿ ಆಯ್ಕೆಯಾದವರಲ್ಲಿ 248 ಶಿಬಿರಾರ್ಥಿಗಳು ವಿವಿಧ ಪದವೀಧರರಿದ್ದಾರೆ.
ಪಿಯು ವಿದ್ಯಾರ್ಹತೆಯ ಮಹಿಳಾ ಪೊಲೀಸ್ ಪೇದೆ ಹುದ್ದೆಗೆ 259 ಜನರಲ್ಲಿ 11 ಶಿಬಿರಾರ್ಥಿಗಳು ಮಾತ್ರ ಪಿಯು ವಿದ್ಯಾರ್ಥಿತೆ ಅಡಿ ಆಯ್ಕೆಯಾಗಿದ್ದರೆ, ಉಳಿದವರು ಪದವೀಧರರು.
ಬಿಇ ಪದವಿಯ 20, ಬಿಟೆಕ್ ಪದವಿಯ 1, ಬಿಕಾಂ 55, ಬಿಎ 50, ಬಿಎಸ್ಸಿ 68, ಬಿಎಬಿಇಡಿ 6, ಬಿಬಿಎಂ 2, ಬಿಸಿಎ 5, ಬಿಎಸ್ಸಿ ಬಿಇಡಿ 6, ಬಿಎಸ್‌ಡಬ್ಲುೃ 2, ಡಿಪ್ಲೊಮಾ 1, ಎಂಕಾಂ 11, ಎಂಕಾಂ ಬಿಇಡಿ 1, ಎಂಎ 6, ಎಂಎ ಬಿಇಡಿ 3, ಎಂಬಿಎ 3, ಎಂಎಸ್ಸಿ 8 ಜನರು ಇದ್ದಾರೆ.
ತರಬೇತಿಯಲ್ಲಿ ಗ್ರಾಮೀಣರೇ ಹೆಚ್ಚು
ಮಹಿಳಾ ಪೊಲೀಸ್ 9ನೇ ಬುನಾದಿ ತರಬೇತಿಯಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 200 ಗ್ರಾಮೀಣ ಪ್ರದೇಶದವರಾಗಿದ್ದರೆ, 59 ಶಿಬಿರಾರ್ಥಿಗಳು ನಗರ ವ್ಯಾಪ್ತಿಯವರು. ಆಯ್ಕೆಯಾದವರಲ್ಲಿ ಕನಿಷ್ಠ 21 ವರ್ಷದಿಂದ ಗರಿಷ್ಠ 32 ವಯಸ್ಸಿನವರೆಗೆ ಇದ್ದಾರೆ. 41 ಜನ ವಿವಾಹಿತರಾಗಿದ್ದರೆ, 218 ಮಂದಿ ಅವಿವಾಹಿತರು.