ಮಡಿಕೇರಿ: ಪ್ರಜಾಪ್ರಭುತ್ವದ ರಕ್ಷಕರಾಗಿರುವ ಪೊಲೀಸರು ಸದಾ ಕರ್ತವ್ಯ ಪ್ರಜ್ಞೆಯನ್ನು ಹೊಂದಿರಬೇಕೆಂದು ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಕರೆ ನೀಡಿದರು.
ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಗರದ ಮೈತ್ರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗು ಜಿಲ್ಲೆ ದೇಶಪ್ರೇಮಿಗಳು ತುಂಬಿರುವ, ದಕ್ಷಿಣ ಭಾರತಕ್ಕೆ ನೀರುಣಿಸುವ ತಲಕಾವೇರಿ ಇರುವ ಪುಣ್ಯಭೂಮಿಯಾಗಿದೆ. ಅದೇ ರೀತಿ ಇಲ್ಲಿನ ಪೊಲೀಸ್ ಅಧಿಕಾರಿಗಳು ರಾಜ್ಯದ ಪೊಲೀಸರಿಗೆ ಮಾದರಿಯಾಗಿದ್ದಾರೆ. ಶಿಸ್ತು, ಸಂಯಮ, ಸಮಯ ಪಾಲನೆ, ಗಂಭೀರ ನಡೆನುಡಿಯಿಂದ ಜಿಲ್ಲೆಯ ಪೊಲೀಸರು ಜನಮನ್ನಣೆ ಗಳಿಸಿಕೊಂಡಿದ್ದಾರೆ. ತಪ್ಪು ಕಂಡರೆ ಪ್ರಶ್ನಿಸುವ ಗುಣವನ್ನು ಹೊಂದಿರುವ ಕೊಡಗಿನವರು ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಪೊಲೀಸರು ನಿವೃತ್ತರಾದರು ತಮ್ಮ ಗತ್ತು, ಗಾಂಭೀರ್ಯ ಬಿಡಬಾರದು. ಪೊಲೀಸ್ ವೃತ್ತಿ ಅದ್ಭುತ ಸೇವೆ ಮಾಡುವ ಅವಕಾಶವಾಗಿದೆ. ಪೊಲೀಸರು ಪ್ರಜಾಪ್ರಭುತ್ವದ ರಕ್ಷಕರಾಗಿದ್ದು, ಜನಸಾಮಾನ್ಯರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರಬೇಕು. ನಮ್ಮ ಕೆಲಸಗಳು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಅರಿತು ಮುನ್ನಡೆಯಬೇಕು. ನಿವೃತ್ತರಾದ ನಂತರ ನಿಮಗಾಗಿ ಜೀವಿಸಿ. ಬದುಕಿಗೆ ಅರ್ಥ ಕಂಡುಕೊಳ್ಳಿ ಎಂದು ಕಿವಿಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಲೆ.ಜ.ಡಾ.ಪ್ರೊ.ಪ್ರಸಾದ್ ಮಾತನಾಡಿ, ಪೊಲೀಸರು ಹಾಗೂ ಸೈನಿಕರ ನಡುವೆ ದೊಡ್ಡ ವ್ಯತ್ಯಾಸಗಳಿಲ್ಲ. ಇವೆರಡು ಕೆಲಸಗಳು ಒಂದೆ ನಾಣ್ಯದ ಎರಡು ಮುಖಗಳಿದಂತೆ. ಶಿಸ್ತು, ನ್ಯಾಯ, ಜನಸೇವೆ ಮಾಡುವುದು ಇಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ವ್ಯಕ್ತಿತ್ವ ಪೊಲೀಸರು ರೂಪಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರಿಗೂ ಸ್ವಾಭಿಮಾನ ಇರಬೇಕು. ಶಿಸ್ತು, ಕರ್ತವ್ಯ ನಿಷ್ಠೆ ಬಹುಮುಖ್ಯವಾಗಿರುತ್ತದೆ. ದೇಶ ಮೊದಲು ಎಂಬ ಭಾವನೆಯಲ್ಲಿರಬೇಕು ಎಂದರು.
ಆರ್ಥಿಕ ಇಲಾಖೆ ನಿವೃತ್ತ ಅಧಿಕಾರಿ ಬಾಚೇಟಿರ ಮಾದಪ್ಪ ಮಾತನಾಡಿ, ಶಿಸ್ತಿನ ಮೂಲಕವೇ ಕೊಡಗು ಪ್ರಸಿದ್ಧಿಗಳಿಸಿಕೊಂಡಿದೆ. ಹಿಂದಿನ ಕಾಲದಲ್ಲಿ ಪೊಲೀಸ್, ಸೈನ್ಯ ಹಾಗೂ ಅರಣ್ಯ ಇಲಾಖೆಯಲ್ಲಿ ಹೆಚ್ಚಾಗಿ ಉದ್ಯೋಗ ದೊರೆಯುತಿತ್ತು. ಇದೀಗ ಕಾಲ ಬದಲಾಗಿ ಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಕೊಡಗಿನ ಹಲವಾರು ಮಂದಿ ಪೊಲೀಸ್ ಇಲಾಖೆ ಉನ್ನತ ಹುದ್ದೆಯಲ್ಲಿದ್ದು, ತಮ್ಮ ಕೆಲಸದ ಮೂಲಕ ಸಾಧನೆ ತೋರಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಪೊಲೀಸ್ ಹುದ್ದೆ ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಸಂಘದ ಗೌರವಾಧ್ಯಕ್ಷ ಎಂ.ಎ.ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೦೦ನೇ ಇಸವಿಯಲ್ಲಿ ಅಂದಿನ ಎಸ್.ಪಿ.ಸೀಮಂತ್ ರಾವ್ ಅವರ ನೇತೃತ್ವದಲ್ಲಿ ಸಂಘ ಸ್ಥಾಪನೆಗೊಂಡಿತು. ಹಲವರು ಸಂಘದ ಬೆಳವಣಿಗೆಗೆ ಅವಿರತ ಶ್ರಮಪಟ್ಟಿದ್ದರ ಪರಿಣಾಮ ಸಂಘದ ಕಟ್ಟಡ ನಿರ್ಮಾಣವಾಗಿ ಇಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ, ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ಶಿವರಾಮ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ.ಮುತ್ತಪ್ಪ, ಪ್ರೊಬೆಷನರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೆನಕ ಪ್ರಕಾಶ್, ರಾಜ್ಯ ಸಂಘದ ಪ್ರಮುಖರಾದ ಜಗದೀಶ್, ರಾಮಲಿಂಗಪ್ಪ, ವೆಂಕಟರಮಣ, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಯಾಲದಾಳು ಕೇಶವಾನಂದ, ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಸಂಘದ ಕಾರ್ಯದರ್ಶಿ ಅಚ್ಚುತ್ತ ನಾಯರ್, ಖಜಾಂಜಿ ಬಿ.ಎಂ.ಭೀಮಯ್ಯ, ಜಂಟಿ ಕಾರ್ಯದರ್ಶಿ ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು. ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಕಲಾ ತಂಡಗಳಿಂದ ನಡೆದ ಸಾಂಸ್ಕೃತಿಕ ಚಟುವಟಿಕೆಗಳು ಮನರಂಜಿಸಿದವು.
ಇಲಾಖೆ ಸೇರ್ಪಡೆಗೆ ಕೊಡಗಿನವರ ಹಿಂದೇಟು
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೆ ಕೊಡಗಿನವರು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಬೇಸರ ವ್ಯಕ್ತಪಡಿಸಿದರು.
ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಲಾಖೆಯಲ್ಲಿ ಅನೇಕ ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ, ಕೆಲವರು ಮಾತ್ರ ತಮ್ಮ ಕರ್ತವ್ಯದ ಮೂಲಕ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಹೃದಯದಿಂದ ಸೇವೆ ಮಾಡಿದರೆ ನಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಜೈಲಿಗೆ ಹಾಕುವುದು, ಶಿಕ್ಷೆ ಕೊಡಿಸುವುದು ಮಾತ್ರ ಅಧಿಕಾರವಲ್ಲ. ಶಾಂತಿ, ಸುವ್ಯವಸ್ಥೆ ಕದಡದಂತೆ ಎಚ್ಚರಿಕೆ ವಹಿಸುವುದು, ಅನ್ಯಾಯ ತಡೆಯುವುದು, ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು, ಜನ ಸೇವೆ ಮಾಡುವುದು ನಿಜವಾದ ಅಧಿಕಾರವಾಗಿರುತ್ತದೆ. ಪೊಲೀಸರು ಸಕಾರತ್ಮಕವಾಗಿ ಅಧಿಕಾರ ಚಲಾಯಿಸಬೇಕು ಎಂದರು.
ಕೊಡಗಿನ ಪೊಲೀಸರು ಬಹಳ ಪ್ರಾಮಾಣಿಕರು. ಸೈನ್ಯದಿಂದ ಪ್ರಭಾವಿತರಾದ ಅದೆಷ್ಟೋ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಅಂತವರು ಇಲಾಖೆಗೆ ಬೆಲೆ ನೀಡಿ ವಿಶ್ವಾಸ ಗಳಿಸಿದ್ದಾರೆ. ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಜನರು ಕಾನೂನು ಬಾಹಿರ ಕೃತ್ಯಗಳಿಗೆ ಚಬೆಂಬಲ ನೀಡುವುದಿಲ್ಲ. ನಿವೃತ್ತರಾದವರಿಗೆ ದೊರಕಬೇಕಾದ ಸೌಲಭ್ಯವನ್ನು ತ್ವರಿತವಾಗಿ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.