user
ಜಿಲ್ಲೆ

ಗೃಹ ಸಚಿವರ ತವರಲ್ಲಿ ಪೊಲೀಸರ ಕಳ್ಳಾಟ: ಆರಕ್ಷಕರ ಕಣ್ಗಾವಲಲ್ಲಿ ಪಡಿತರ ಅಕ್ಕಿ ಸಾಗಣೆ?

ವಿಜಯವಾಣಿ ವಿಶೇಷ ಕಲಬುರಗಿ

ಬಡವರ ಹೊಟ್ಟೆ ತುಂಬಲು ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಗೂಡ್ಸ್​ ವಾಹನ ತಡೆದು ಪೊಲೀಸರು ಠಾಣೆಗೆ ತಂದಿದ್ದು, ಕೆಲ ಹೊತ್ತಿನ ನಂತರ ಅದೇ ವಾಹನ ರಾಜ್ಯದ ಗಡಿ ದಾಟಿ ಅಕ್ಕಲಕೋಟಗೆ ಹೋಗಿ ಪುನ@ ಠಾಣೆಗೆ ಬಂದ ಅಚ್ಚರಿಯ ವಿದ್ಯಮಾನ ಶನಿವಾರ ತಡರಾತ್ರಿ (ಭಾನುವಾರ ನಸುಕಿನ ಜಾವದ ಮಧ್ಯೆ) ನಡೆದಿದೆ.

ನಗರದಿಂದ ಆಳಂದ ಮಾರ್ಗವಾಗಿ ಸೊಲ್ಲಾಪುರಕ್ಕೆ ಗೂಡ್ಸ್​ ವಾಹನದಲ್ಲಿ ಅಕ್ಕಿ ಸಾಗಿಸುತ್ತಿರುವ ಮಾಹಿತಿ ಮೇರೆಗೆ 112 ಪೊಲೀಸರು ವಾಹನವನ್ನು ಆಳಂದ ಹೊರವಲಯದಲ್ಲಿ ನಿಲ್ಲಿಸಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುತ್ತಾರೆ. ಆದರೆ ಕೆಲ ಗಂಟೆ ನಂತರ ಠಾಣೆಯಿಂದ ನಾಪತ್ತೆಯಾಗುವ ಈ ವಾಹನ ಮಹಾರಾಷ್ಟ್ರದ ಅಕ್ಕಲಕೋಟನತ್ತ ಸಾಗುತ್ತದೆ.

ಪುನ@ ಠಾಣೆಗೆ ಬಂದ ವಾಹನ: ರಾತ್ರೋರಾತ್ರಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ಠಾಣೆಯಿಂದಲೇ ನಾಪತ್ತೆಯಾಗಿ ಮಹಾರಾಷ್ಟ್ರದ ಅಕ್ಕಲಕೋಟಗೆ ಹೋಗಿರುತ್ತದೆ. ಈ ಸುದ್ದಿ ಎಲ್ಲೆಡೆ ಹರಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಪೊಲೀಸರು ಅಕ್ಕಲಕೋಟೆಗೆ ಹೋಗಿ, ವಾಹನದವರಿಗೆ ಮನವೊಲಿಸಿ ಬೆಳಗ್ಗಿನ ಜಾವ ವಾಹನವನ್ನು ವಾಪಸ್​ ಆಳಂದಕ್ಕೆ ಕರೆತರಲಾಗುತ್ತದೆ. ಆದರೆ ಅದರಲ್ಲಿದ್ದ ಅರ್ಧಕ್ಕಿಂತ ಹೆಚ್ಚಿನ ಅಕ್ಕಿ ಚೀಲಗಳು ಖಾಲಿ ಆಗಿವೆ ಎಂದು ತಿಳಿದು ಬಂದಿದೆ. ಅಕ್ಕಲಕೋಟದಲ್ಲಿ ನಿಲೇಶ ಎಂಬಾತನಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪೊಲೀಸರ ನಡೆ ಅನುಮಾನ

ಸಾ ಸಮೇತ ಅಕ್ಕಿ ಇದೆ ಎಂಬ ವಿಡಿಯೋ ಹರಿದಾಡಿದ್ದು, ಮಧ್ಯ ರಸ್ತೆಯಲ್ಲಿ ಗೂಡ್ಸ್​ ವಾಹನ ನಿಲ್ಲಿಸಿದ 112 ಪೊಲೀಸರು ಠಾಣೆಗೆ ಕೊಂಡೊಯ್ದಿದ್ದಾರೆ. ಆದರೆ ಕೆಲವೇ ಗಂಟೆಯಲ್ಲಿ ವಾಹನ ಠಾಣೆಯಿಂದ ಹೊರಗಡೆ ಹೇಗೆ ಹೋಯಿತು? ರಾಜ್ಯದ ಗಡಿ ದಾಟಿ ಅಕ್ಕಲಕೋಟಗೆ ಹೇಗೆ ತೆರಳಿತು? ಅರ್ಧ ಅಕ್ಕಿ ಚೀಲಗಳನ್ನು ಖಾಲಿ ಮಾಡಿಸಿ ವಾಪಸ್​ ಏಕೆ ಬಂತು? ಠಾಣೆಯಲ್ಲಿ ಪೊಲೀಸರು ಇರಲಿಲ್ಲವೇ? ಅಥವಾ ಇದ್ದರೂ ಜಾಣಮೌನ ವಹಿಸಿದ್ದರೆ ಎಂಬುದು ಸೇರಿ ಇಡೀ ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನ ಮೂಡಿಸಿದೆ.

ಎಫ್​​ಐಆರ್​ ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಪಡಿತರ ಅಕ್ಕಿ ಸಾಗಣೆ ವಿರುದ್ಧ ಶರಣು ಅವರಾದಿ ಎಂಬುವವರ ಮೇಲೆ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.