ಜಿಲ್ಲೆ

ನವಜಾತ ಶಿಶು ತಾಯಿಗಾಗಿ ಹುಡುಕಾಟ: ನಾಲ್ಕು ಜಿಲ್ಲೆಗಳಲ್ಲಿ ಪೊಲೀಸರ ಪರಿಶೀಲನೆ

ಮಂಡ್ಯ: ನಗರದ ಮಿಮ್ಸ್‌ನಲ್ಲಿ ನವಜಾತ ಗಂಡು ಶಿಶುವನ್ನು ಬಿಟ್ಟು ತಾಯಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ತೀವ್ರಗೊಂಡಿದೆ. ಅಂತೆಯೇ ಮಗುವಿನ ತಾಯಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ಠಾಣೆ ಪೊಲೀಸರು, ಚಾಮರಾಜನಗರ ಮತ್ತು ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಆಕೆಯ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದ್ದು, ಮುಂದಿನ ಹಂತದಲ್ಲಿ ಬೆಂಗಳೂರು ಭಾಗದಲ್ಲಿ ತಪಾಸಣೆ ನಡೆಸಲಿದ್ದಾರೆ. ಇತ್ತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಬಾಲಮಂದಿರದಲ್ಲಿ ಆರೈಕೆಗೊಳಪಟ್ಟಿರುವ ಮಗು ಆರೋಗ್ಯವಾಗಿದೆ.

ಫೆ.23ರಂದು ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಾಖಲಾಗಿದ್ದ ಬನ್ನಮ್ಮ ಎಂಬಾಕೆ ಗಂಡು ಮಗುವನ್ನು ಬಿಟ್ಟು ಪರಾರಿಯಾಗಿದ್ದಳು. ಈ ಸಂಬಂಧ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕಿ ಎಸ್.ಎಂ.ಶೈಲಜಾ ದೂರು ಸಲ್ಲಿಸಿದ್ದರು.