module: a; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 120.0; hist255: 0.0; hist252~255: 0.0; hist0~25: 0.0; 
ಜಿಲ್ಲೆ

ಡ್ರಗ್ಸ್, ಅಪರಾಧ ಮುಕ್ತಕ್ಕೆ ಪೊಲೀಸ್ ರನ್

ಹುಬ್ಬಳ್ಳಿ: ಫಿಟ್ನೆಸ್ ಫಾರ್ ಆಲ್, ಡ್ರಗ್ಸ್ ಹಾಗೂ ಅಪರಾಧ ಮುಕ್ತ ನಗರವಾಗಿಸುವ ಉದ್ದೇಶದಿಂದ ಹು-ಧಾ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಪೊಲೀಸ್ ರನ್ ಏರ್ಪಡಿಸಲಾಗಿತ್ತು.

ನಗರದ ಚನ್ನಮ್ಮ ವೃತ್ತದಿಂದ ಆರಂಭವಾದ 5 ಕಿ.ಮೀ. ರನ್ ತೋಳನಕೆರೆವರೆಗೆ ಹೊರಟರೆ, 10 ಕಿ.ಮೀ. ರನ್ ಚನ್ನಮ್ಮ ವೃತ್ತದಿಂದ ಉಣಕಲ್ ಪ್ರೆಸಿಡೆಂಟ್ ತಲುಪಿ ತೋಳನಕೆರೆ ತಲುಪಿತು. ದಾರಿಯುದ್ದಕ್ಕೂ ಪೊಲೀಸರ ಪರ ಘೋಷಣೆಗಳು ಮೊಳಗಿದವು. ರನ್‌ನಲ್ಲಿ ಭಾಗವಹಿಸಿದ್ದವರಿಗೆ ದಾರಿಯಲ್ಲಿ ಮಜ್ಜಿಗೆ, ನೀರು ವಿತರಿಸಲಾಯಿತು.

ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಮಾದಕವಸ್ತು ಬಳಕೆ ತಡೆ ಮತ್ತು ಸಂಚಾರ ನಿಯಮಗಳ ಬಗ್ಗೆ ನಿರಂತರವಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ. ಬರೀ ದಿನಾಚರಣೆಗಳಿಂದ ನಮ್ಮ ಉದ್ದೇಶ ಸಫಲವಾಗುವುದಿಲ್ಲ. ಅದನ್ನು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅನುಷ್ಠಾನಕ್ಕೆ ತಂದಾಗ ಸಾರ್ಥಕವಾಗುತ್ತದೆ. ಡ್ರಗ್ಸ್ ನಿಯಂಯ್ರಣ ಹಾಗೂ ರಸ್ತೆ ಅಪಘಾತ ತಪ್ಪಿಸಿ ಸಂಚಾರ ನಿಯಮಗಳನ್ನು ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಬೇಕು ಎಂದರು.

ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕರಾದ ಶಿವಾ ಸಂಕೇಶ್ವರ ಅವರು ಮಾತನಾಡಿ, ನಾವು ಕೂಡ ಮ್ಯಾರಥಾನ್ ಸೇರಿ ಬೇರೆ ಬೇರೆ ಕಾರ್ಯಕ್ರಮ ಮಾಡುತ್ತೇವೆ. ಸಿಎಸ್‌ಆರ್ ಫಂಡ್ ಮೂಲಕ ಸಹಕಾರ ಕೂಡ ಕೊಡಲಾಗುತ್ತಿದೆ. ಯೋಧರಿಗೆ ಕೊಟ್ಟಂತೆ ಪೊಲೀಸ್ ಇಲಾಖೆಗೂ ಗೌರವ ಕೊಡುತ್ತಿದ್ದೇವೆ. ಅವರ ತ್ಯಾಗ, ದೇಶಪ್ರೇಮವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸಾರ್ವಜನಿಕರ ನೆಮ್ಮದಿಯಾಗಿಯೇ ಅವರು ಹಗಲಿರಳು ದುಡಿಯುತ್ತಿದ್ದಾರೆ ಎಂದು ಸ್ಮರಿಸಿದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಈ ಹಿನ್ನೆಲೆಯಲ್ಲಿ ಜನರ ಭಾಗವಹಿಸುವಿಕೆಗೆ ಒತ್ತು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಗಟ್ಟಿತನ ಕಾಪಾಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಕಾಣಲು ಸಾಧ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಮಾತನಾಡಿದರು.

ಹುಡಾ ಅಧ್ಯಕ್ಷ ಶಾಕೀರ ಸನದಿ, ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಎಎಸ್‌ಪಿ ನಾರಾಯಣ ಭರಮನಿ, ಉದ್ಯಮಿ ತಬ್ರೇಜ್ ಸಂಶಿ, ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರೊ.ಎಂ.ಆರ್. ಪಾಟೀಲ, ಶಾಂತರಾಜ ಪೋಳ, ನಾಗರಾಜ ಗೌರಿ, ಇತರರು ಭಾಗವಹಿಸಿದ್ದರು.

5ಕಿ.ಮೀ. ರನ್‌ನಲ್ಲಿ ನವೀನ ಪಾಟೀಲ (ಪ್ರಥಮ), ಸಂಗಮೇಶ ಎಂ. (ದ್ವಿತೀಯ), ರೋಹಿತ ಬಿಜಾಪುರ (ತೃತೀಯ), 10ಕಿ.ಮೀ.ನಲ್ಲಿ (ಮಹಿಳೆಯರು) ಸೌಜನ್ಯ ಪೂಜೇರಿ, ತನಿಷಾ ಇಂಗಳಗಿ, ನಿಖಿತಾ ಎನ್., (ಪುರುಷರ ವಿಭಾಗ) ಎಚ್.ಪರಸಪ್ಪ, ದೇವರಾಜ ಕೆ., ವೈ.ಎಸ್. ಜಯರಾಮ ಬಹುಮಾನ ಪಡೆದರು. 10ಕಿ.ಮೀ. ಪೂರೈಸಿದ ಬಾಲಕ ರಂಗನಾಥ ನಾಗನೂರಗೆ ವಿಶೇಷ ಬಹುಮಾನ ಕೊಡಲಾಯಿತು. ಆರ್‌ಜೆ ರಶೀದ್, ಆರ್‌ಜೆ ಮಾಧುರಿ ನಿರೂಪಿಸಿದರು.