ವಿಜಯವಾಣಿ ಸುದ್ದಿಜಾಲ ಧಾರವಾಡ
ಆಸ್ಟ್ರೇಲಿಯಾ ಯುವತಿಯೊಬ್ಬಳು ಲಾಕ್ ಡೌನ್ನಿಂದಾಗಿ ಹುಬ್ಬಳ್ಳಿಯಲ್ಲಿ ಸಿಲುಕಿ ಪರದಾಡುತ್ತಿದ್ದಳು. ತನ್ನ ದೇಶಕ್ಕೆ ಮರಳಲು ಹವಣಿಸುತ್ತಿದ್ದ ಯುವತಿಯ ಸಂಕಷ್ಟಕ್ಕೆ ಪೊಲೀಸ್ ಅಧಿಕಾರಿಗಳು ಗುರುವಾರ ಸ್ಪಂದಿಸಿದ್ದಾರೆ. ಶೀಘ್ರವೇ ದೆಹಲಿಯವರೆಗೆ ಪ್ರಯಾಣದ ವ್ಯವಸ್ಥೆ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.
ಧ್ಯಾನ ಶಿಬಿರವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆಸ್ಟ್ರೇಲಿಯಾ ಯುವತಿ, ಹುಬ್ಬಳ್ಳಿಯ ಲಾಜ್ವೊಂದರಲ್ಲಿದ್ದಳು. ಜಿಲ್ಲಾಧಿಕಾರಿ ಕಚೇರಿಗೆ ಹಲವಾರು ಬಾರಿ ಆಗಮಿಸಿ ನೆರವು ಕೋರಿದ್ದಳು.
ಗುರುವಾರ ಮಧ್ಯಾಹ್ನವೂ ಆಗಮಿಸಿದ್ದ ಆಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಲೆಯು ತ್ತಿದ್ದಳು. ಈ ವೇಳೆ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಎಸ್ಪಿ ವರ್ತಿಕಾ ಕಟಿಯಾರ್ ಹಾಗೂ ಡಿಸಿಪಿ ಎಂ. ಕೃಷ್ಣಕಾಂತ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದಳು. ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಹುಬ್ಬಳ್ಳಿಯಿಂದ ದೆಹಲಿಯವರೆಗೆ ಶೀಘ್ರವೇ ವಿಮಾನ ಪ್ರಯಾಣದ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಈ ಬಗ್ಗೆ ಅಗತ್ಯ ನೆರವು ನೀಡಿ ಟಿಕೆಟ್ ವ್ಯವಸ್ಥೆ ಮಾಡಿಸುವಂತೆ ಉಪನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರಗೆ ಜವಾಬ್ದಾರಿ ವಹಿಸಿದ್ದಾರೆ.