ಜಿಲ್ಲೆ

ಶುರುವಾಗಿದೆ ಪೊಲೀಸರ ಖದರ್

ಮರಿದೇವ ಹೂಗಾರ


ಹುಬ್ಬಳ್ಳಿ: ರೌಡಿಗಳ ಅಟ್ಟಹಾಸ ಮೆರೆಯುತ್ತಿದ್ದ ನಗರದ ವಿವಿಧ ಪ್ರದೇಶಕ್ಕೆ ತೆರಳುತ್ತಿರುವ ಪೊಲೀಸರು ತಮ್ಮ ಖದರ್ ತೋರಿಸುತ್ತಿದ್ದಾರೆ.
ಈಗಾಗಲೇ ವಿವಿಧ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮನೆಗೆ ತೆರಳಿ ಎಚ್ಚರಿಕೆ ನೀಡಿರುವ ಪೊಲೀಸರು, ಬಾಲ ಬಿಚ್ಚದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಸಾರ್ವಜನಿಕರಿಂದ ಮತ್ತೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ‘ಪೊಲೀಸ್ ಏರಿಯಾ ಡಾಮಿನೇಷನ್’ ಶರುವಾಗಿದೆ.
ಶನಿವಾರ ತಡರಾತ್ರಿ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ 20 ರೌಡಿಶೀಟರ್ ಹಾಗೂ ಮದ್ಯ ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 45 ಜನರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 50 ಜನರ ವಿರುದ್ಧ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಚ್ಚರಿಕೆಯನ್ನೂ ನೀಡಲಾಗಿದೆ. ವಶಕ್ಕೆ ಪಡೆದವರ ಇಂದಿನ ಹಾಗೂ ಹಿಂದಿನ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತೀವ್ರ ನಿಗಾ ಇಡಲಾಗಿದೆ. ಸೂಕ್ತ ಬುದ್ದಿವಾದ ಹೇಳುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.