ಮಡಿಕೇರಿ:
ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ಶಾಂತಿ ಸುವ್ಯಸ್ಥೆ ಕಾಪಾಡಲು ಹಾಗೂ ಸಂಚಾರ ದಟ್ಟಣೆ ತಪ್ಪಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ. ಬೇರೆ ಬೇರೆ ಕಡೆಗಳಿಂದ ಕೊಡಗಿಗೆ ಅಧಿಕಾರಿಗಳು ಸೇರಿದಂತೆ ಸುಮಾರು 2 ಸಾವಿರ ಪೊಲೀಸರು ಬಂದೋಬಸ್ಥ್ಗಾಗಿ ಬರಲಿದ್ದಾರೆ. ಹಿಂದಿನ ವರ್ಷದ ಲೋಪಗಳು ಮತ್ತು ಸಾರ್ವಜನಿಕರ ಸಲಹೆ ಮೇಲೆ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈಗಾಗಲೇ ಇರುವ 800 ಸಿಸಿಟಿವಿಗಳ ಜತೆಗೆ ಮತ್ತಷ್ಟು ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ನಗರ ಪೊಲೀಸ್ ಠಾಣೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗುತ್ತದೆ. 4 ಹೆಲ್ಪ್ ಡೆಸ್ಕ್ಗಳನ್ನೂ ಆರಂಭಿಸಲಾಗುತ್ತಿದೆ. ದಶಮಂಟಪಗಳ ಶೋಭಾ ಯಾತ್ರೆ ವೀಕ್ಷಣೆಗೆ ಹಳೆಯ ಕಟ್ಟಡಗಳ ಮೇಲೆ ಜನರು ಹತ್ತದಂತೆ ನೋಡಿಕೊಳ್ಳಲಾಗುವುದು ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರ ಸುರಕ್ಷತೆಯ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ 8 ಜಂಬೋ ತಂಡಗಳನ್ನು ರಚಿಸಲಾಗಿದೆ. ತಲಾ ಒಂದೊAದು ತಂಡದಲ್ಲೂ ಒಬ್ಬರು ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 15 ಸಿಬ್ಬಂದಿ ಇರುತ್ತಾರೆ. ಹೆಣ್ಣುಮಕ್ಕಳನ್ನು ಚುಡಾಯಿಸುವ, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ನೀಡುವ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಿಡಿಗೇಡಿಗಳ ಬಗ್ಗೆ ಈ ತಂಡ ನಿಗಾ ಇಟ್ಟು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.
ರಾಜಾ ಸೀಟ್‌ನಿಂದ ಗಾಂಧಿ ಮೈದಾನ, ಎಂ.ಎA. ವೃತ್ತ, ಜಿ.ಟಿ. ವೃತ್ತ, ಜನತಾ ಬಜಾರ್‌ನಿಂದ ಅಂಚೆ ಕಚೇರಿ, ಹಳೇ ಖಾಸಗಿ ಬಸ್ ನಿಲ್ದಾಣ, ಐ.ಜಿ. ವೃತ್ತ ಎಸ್.ಬಿ.ಐ. ಜಂಕ್ಷನ್‌ನಿAದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಮಾರ್ಕೆಟ್ ಜಂಕ್ಷನ್, ಮಹದೇವಪೇಟೆ ರಸ್ತೆಯಲ್ಲಿ ಜಂಬೋ ತಂಡಗಳು ಕಾರ್ಯನಿರ್ವಹಿಸಲಿವೆ.
ಮುಖವಾಡ ಧರಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಕರ್ಕಶ ಶಬ್ದ ಹೊರ ಹಾಕುವ ಪೀಪಿ, ತುತ್ತೂರಿಯ ಬಳಕೆ ಮತ್ತು ಮಾರಾಟ ಮಾಡುವುದನ್ನೂ ನಿರ್ಬಂಧಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆಗಾಗಿ ವಿಧ್ವಂಸಕ ಕೃತ್ಯ ಪತ್ತೆ ತಂಡ, ಶ್ವಾನ ದಳದಿಂದ ವಿಧ್ವಂಸಕ ಕೃತ್ಯಗಳ ಚಟುವಟಿಕೆಗಳ ಪರಿಶೀಲನೆ ನಡೆಸಲಾಗುವುದು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸ್ಕೆöÊ-ಸೆಂಟ್ರಿ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಿ, ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗುವುದು. ಇದಕ್ಕಾಗಿ ನೈಟ್ ವಿಜನ್ ಬೈನಾಕ್ಯುಲರ್‌ಗಳನ್ನು ಹಾಗೂ ಸಾಕಷ್ಟು ಸಂಖ್ಯೆಯ ವೀಡಿಯೋ ಕ್ಯಾಮರಗಳನ್ನು ಬಳಸಲಾಗುವುದು. ನಿರ್ಜನ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಗಸ್ತು ಏರ್ಪಾಡು ಮಾಡಿದ್ದು, ಇದಕ್ಕಾಗಿ ಇಲಾಖಾ ಬೇಪ್ ಹಾಗೂ ಚೀತಾ ಬೈಕ್‌ಗಳನ್ನು ಬಳಸಲಾಗುವುದು.
ದಸರಾ ದಶಮಂಟಪಗಳ ಶೋಭಾಯಾತ್ರೆಯ ಅಂಗವಾಗಿ ಮಡಿಕೇರಿ ನಗರದಲ್ಲಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನಗಳ ಸಂಚಾರದಲ್ಲಿ ಹಾಗೂ ವಾಹನಗಳ ನಿಲುಗಡೆ ಸಂಬAಧ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ಅ.12ರ ಅಪರಾಹ್ನ 3 ಗಂಟೆಯಿAದ ಅ. 13ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರದ ಒಳಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ದಶಮಂಟಪಗಳು ಸಾಗುವ ಮತ್ತು ಜನ ಸಂದಣಿ ಹೆಚ್ಚು ಸೇರುವ ರಸ್ತೆಗಳಲ್ಲಿ ಪ್ರಮುಖವಾಗಿ ಸುದರ್ಶನ ವೃತ್ತದಿಂದ ಜಿ.ಟಿ ವೃತ್ತದವರೆಗೆ, ರಾಜಾಸೀಟ್‌ನಿಂದ ಎಂ.ಎA ವೃತ್ತದ ವರೆಗೆ, ಎಂ.ಎA. ವೃತ್ತದಿಂದ-ಹಳೇ ಖಾಸಗಿ ಬಸ್ ನಿಲ್ದಾಣ, ಹಳೇ ಖಾಸಗಿ ಬಸ್ ನಿಲ್ದಾಣದಿಂದ ಐ.ಜಿ ವೃತ್ತದವರೆಗೆ, ಐ.ಜಿ ವೃತ್ತದಿಂದ ಬನ್ನಿ ಮಂಟಪದವರೆಗೆ, ಗಣಪತಿ ಬೀದಿ, ಕಾಲೇಜು ರಸ್ತೆ, ಎಸ್.ಬಿ.ಐ ಜಂಕ್ಷನ್, ಮೊಣ್ಣಪ್ಪ ಗ್ಯಾರೇಜ್ ನಿಂದ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಲಾಗಿದೆ.
ಮೈಸೂರಿನಿಂದ ಮಂಗಳೂರು ಕಡೆಗೆ ಚಲಿಸುವ ವಾಹನಗಳು ಕುಶಾಲನಗರ ಕಡೆಯಿಂದ ಗುಡ್ಡೆಹೊಸೂರಿಗೆ ಬಂದು ಗುಡ್ಡೆಹೊಸೂರಿನಿಂದ ಸಿದ್ದಾಪುರ ಕಡೆಗೆ ತೆರಳುವ ರಸ್ತೆಯಲ್ಲಿ ಒಂಟಿಯAಗಡಿ ಮಾರ್ಗವಾಗಿ ಅರೆಕಾಡು ಜಂಕ್ಷನ್‌ಗೆ ತೆರಳಿ ಬಲಕ್ಕೆ ತಿರುಗಿ ಮರಗೋಡು ಜಂಕ್ಷನ್ ಮಾರ್ಗವಾಗಿ ಹಾಕತ್ತೂರಿಗೆ ಬಂದು, ಮಡಿಕೇರಿ ವಿರಾಜಪೇಟೆ ರಸ್ತೆಯ ಬಲಕ್ಕೆ ತಿರುಗಿ ಮೇಕೇರಿ ಜಂಕ್ಷನ್ ತಲುಪಿ ಅಲ್ಲಿಂದ ಅಪ್ಪಂಗಳ ನಾಪೋಕ್ಲು ತಡೆಗೆ ಹೋಗುವ ಜಂಕ್ಷನ್‌ಗೆ ಹೋಗಿ ನಂತರ ತಾಳತ್‌ಮನೆ ಕಡೆ ತಿರುಗಿ ಮಂಗಳೂರು ರಸ್ತೆಗೆ ತೆರಳಬೇಕಿದೆ.
ಮಂಗಳೂರಿನಿAದ ಮೈಸೂರು ಕಡೆಗೆ ಚಲಿಸುವ ವಾಹನಗಳು ತಾಳತ್‌ಮನೆ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ಮೇಕೇರಿ ಜಂಕ್ಷನ್‌ಗೆ ತೆರಳಿ, ಮೇಕೇರಿ ಜಂಕ್ಷನ್‌ನಿAದ ಬಲಕ್ಕೆ ತಿರುಗಿ ಹಾಕತ್ತೂರು, ಹಾಕತ್ತೂರಿನಿಂದ ಮರಗೋಡು ಜಂಕ್ಷನ್, ಮರಗೋಡು ಜಂಕ್ಷನ್‌ನಿAದ ಅರೆಕಾಡು ಜಂಕ್ಷನ್, ಅರೆಕಾಡು ಜಂಕ್ಷನ್ ಒಂಟಿಯAಗಡಿ ಜಂಕ್ಷನ್, ಒಂಟಿಯAಗಡಿ ಜಂಕ್ಷನ್ ನಿಂದ ಗುಡ್ಡೆಹೊಸೂರು, ಗುಡ್ಡೆಹೊಸೂರಿನಿಂದ ಕುಶಾಲನಗರ ರಸ್ತೆಗೆ ತೆರಳಬೇಕು.
ಮಂಗಳೂರು, ಮೈಸೂರು, ಸೋಮವಾರಪೇಟೆ, ವಿರಾಜಪೇಟೆ, ಗಾಳಿಬೀಡು ಭಾಗಗಳಿಂದ ಮಡಿಕೇರಿ ನಗರಕ್ಕೆ ಬರುವ ವಾಹನಗಳಿಗೆ ವಿವಿಧೆಡೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಗರವನ್ನು ಪ್ರವೇಶಿಸುವ ವಿವಿಧೆಡೆ 11 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗುತ್ತಿದೆ. ನಗರದೊಳಗೆ ಬರುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುವುದು. ಮದ್ಯ ತರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.