ಕ್ರೀಡಾಕೂಟದಲ್ಲಿ ನಿರತ ಪೊಲೀಸರು. 
ಜಿಲ್ಲೆ

ಕೆಸರಿನೋಕುಳಿಯಲ್ಲಿ ಮಿಂದೆದ್ದ ಆರಕ್ಷಕರು

ಗೋಣಿಕೊಪ್ಪಲು: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸದಾ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರು, ಕರ್ತವ್ಯದ ಜಂಜಾಟ ಬದಿಗಿರಿಸಿ, ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಪೊಲೀಸರ ಕೆಸರುಗದ್ದೆ ಕ್ರೀಡಾಕೂಟವನ್ನು ಗೋಣಿಕೊಪ್ಪಲ್ಲಿನ ಕಾಳಪ್ಪ ಕಾಲನಿಯ ವಿ.ವಿ.ಕಾಳಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಿರಾಜಪೇಟೆ ತಾಲೂಕು ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ಮಾತನಾಡಿ, ಸದಾ ಕರ್ತವ್ಯ ನಿರತರಾಗುವ ಪೊಲೀಸರಿಗೆ ಒಂದು ದಿನದ ಮನರಂಜನೆ ಹಾಗೂ ಕ್ರೀಡಾ ಕೌಶಲದ ವೃದ್ಧಿಗಾಗಿ ಮೊದಲ ಬಾರಿಗೆ ವಿರಾಜಪೇಟೆ ವಿಭಾಗದ ಪೊಲೀಸರಿಗೆ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಇದನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ವರ್ಷದಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ವಿಭಾಗದ ಪೊಲೀಸರಿಗೂ ಇಂಥದ್ದೆ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪ್ಸ್ ಶಾಲೆಯ ಅಧ್ಯಕ್ಷ ಧನ್ಯಸುಬ್ಬಯ್ಯ ಮಾತನಾಡಿ, ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ವಿರಾಜಪೇಟೆ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, 20 ವರ್ಷದ ಕರ್ತವ್ಯದ ಅವಧಿಯಲ್ಲಿ ಇದೇ ಮೊದಲು ಪೊಲೀಸ್ ಸಿಬ್ಬಂದಿಗೆ ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಕುಟ್ಟ ಸಬ್‌ಇನ್‌ಸ್ಪೆಕರ್ ಮಹಾದೇವ ಎಚ್. ಕೆ.ಶ್ರೀಮಂಗಲ ಸಬ್‌ಇನ್‌ಸ್ಪೆಕರ್ ರವೀಂದ್ರ, ಗೋಣಿಕೊಪ್ಪಲು ಸಬ್‌ಇನ್‌ಸ್ಪೆಕರ್ ಪ್ರದೀಪ್, ವಿರಾಜಪೇಟೆ ಗ್ರಾಮಾಂತರ ಸಬ್‌ಇನ್‌ಸ್ಪೆಕರ್ ಲತಾ ಹಾಗೂ ವಾಣಿ, ವಿರಾಜಪೇಟೆ ನಗರ ಸಬ್‌ಇನ್‌ಸ್ಪೆಕರ್ ಪ್ರಮೋದ್, ಪೊನ್ನಂಪೇಟೆ ಸಬ್ ಇನ್‌ಸ್ಪೆಕ್ಟರ್‌ಗಳಾದ ನವೀನ್, ಗದ್ದೆಯ ಮಾಲೀಕ ಅಜಯ್, ಮಾನಸ ತಿಮ್ಮಯ್ಯ ಇದ್ದರು.

ಸಭಾ ಕಾರ್ಯಕ್ರಮದ ಬಳಿಕ ನೆರೆದಿದ್ದ ಗಣ್ಯರು ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ ಹಾಗೂ ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿಗೆ ಭತ್ತದ ಪೈರು ನೀಡುವುದರ ಮೂಲಕ ಕೆಸರಿನ ಗದ್ದೆಯಲ್ಲಿ ಭತ್ತದ ಪೈರನ್ನು ನಾಟಿ ಮಾಡುವ ಮೂಲಕ ಭೂಮಿ ತಾಯಿಗೆ ವಂದಿಸಿ, ಕೆಸರು ಗದ್ದೆಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಓಟದ ಸ್ಪರ್ಧೆ, ಮಹಿಳೆಯರಿಗೆ ಥ್ರೋಬಾಲ್, ಪೊಲೀಸ್ ಹುದ್ದೆಯಲ್ಲಿರುವ ದಂಪತಿಗೆ ಕಪ್ಪಲ್ ರೇಸ್, ಪೊಲೀಸರ ಮಕ್ಕಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ತುಂಬಿ ತುಳುಕುತಿದ್ದ ಮಂಡಿವರೆಗಿನ ಕೆಸರಿನ ನೀರಿನಲ್ಲಿ ವಾಲಿಬಾಲ್ ಆಡಿದ ಪೊಲೀಸರು ಎದ್ದುಬಿದ್ದು ಹೊರಳಾಡಿ ಗೆಲುವು ಸಾಧಿಸಲು ಸೆಣಸಾಡಿದರು. ಮತ್ತೊಂದೆಡೆ ಮಹಿಳೆಯರ ಹಗ್ಗಜಗ್ಗಾಟ ರೋಚಕವಾಗಿತ್ತು. ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸರು ಕೆಸರು ಗದ್ದೆಯಲ್ಲಿ ವರ್ಣರಂಜಿತ ಸಾಮಾನ್ಯ ಉಡುಗೆಯಲ್ಲಿ ಕಂಗೊಳಿಸಿದರು. ಓಟದ ಸ್ಪರ್ಧೆಯಲ್ಲಿಯೂ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು. ಮಹಿಳಾ ಪೊಲೀಸರು, ಪುರುಷ ಪೊಲೀಸರು ಹಾಗೂ ಅವರ ಕುಟುಂಬದ ಮಕ್ಕಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೆಸರಿನ ಓಕುಳಿಯಲ್ಲಿ ಮಿಂದೆದ್ದರು. ಪುರುಷರ ನಡುವಿನ ಕಬಡ್ಡಿ ಪಂದ್ಯವು ಕೂಡ ಹಣಾಹಣಿಯಿಂದ ಕೂಡಿತ್ತು. ಎದುರಾಳಿ ಆಟಗಾರನನ್ನು ಹಿಡಿಯುವಾಗ ಕೆಸರು ನೀರಿನಲ್ಲಿ ಬಿದ್ದು ಹೊರಳಾಡುತ್ತಿದ್ದುದು ರೋಮಾಂಚಕಾರಿಯಾಗಿತ್ತು.