ಜಿಲ್ಲೆ

ಅಹಿತಕರ ಚಟುವಟಿಕೆ ಮೇಲೆ ಪೊಲೀಸರ ನಿಗಾ

ನರಗುಂದ: ಧಾರ್ಮಿಕ ಹಬ್ಬಗಳನ್ನು ಭಕ್ತಿಯ ಖುಷಿಯಾಗಿರಲು ಆಚರಿಸಬೇಕೇ ಹೊರತು ಸ್ವಾರ್ಥ ಸಾಧನೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಆಚರಿಸಬಾರದು. ಇಂಥವರಿಂದ ಎಚ್ಚರಿಕೆಯಿಂದ ಇರಬೇಕಿದೆ ಎಂದು ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಹೇಳಿದರು.

ಬಕ್ರೀದ್ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಾಂತಿ ಕದಡುವರನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿವೆ. ಇವುಗಳನ್ನು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದರು.

ಸಿಪಿಐ ಮಂಜುನಾಥ ನಡುವಿನಮನಿ ಮಾತನಾಡಿ, ಬಕ್ರೀದ್ ಶಾಂತಿಯುತವಾಗಿ ಆಚರಿಸಬೇಕು. ಇಲಾಖೆಯಿಂದ ನೀಡಲಾಗುವ ವಿವಿಧ ಸಲಹೆ, ಸೂಚನೆಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು. ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಮಾಡುವುದು, ಸಂದೇಶಗಳನ್ನು ಫಾರ್ವರ್ಡ್ ಮಾಡಿ ಮತ್ತೊಬ್ಬರ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡುವುದು ಅಪರಾಧ. ಇಂತಹ ಚಟುವಟಿಕೆ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಪ್ರೀತಿ, ವಿಶ್ವಾಸದಿಂದ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

ಪಿಎಸ್‌ಐ ಸಯ್ಯದ್ ಬಾದಷಾ ಸೋಲಾಪೂರ, ಅಂಜುಮನ್ ಕಮಿಟಿ ಅಧ್ಯಕ್ಷ ಐ.ಪಿ. ಚಂದೂನವರ, ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ, ಪುರಸಭೆ ವಿರೋಧ ಪಕ್ಷದ ಮುಖಂಡ ಅಪ್ಪಣಗೌಡ ನಾಯ್ಕರ್, ಅಬ್ದುಲ್ ಸಮುದ ಮುಲ್ಲಾ ಮಾತನಾಡಿದರು. ದಾದಾಸಾಬ್ ಮುಲ್ಲಾ, ಇಮಾಮ್‌ಸಾಬ್ ನದಾಫ, ವೈ.ಎಸ್. ನಾಯ್ಕರ್, ಎಸ್.ಎ. ಖಾಜಿ, ಎಂ.ಎಚ್. ಹವಾಲ್ದಾರ, ಎಂ.ಕೆ. ದಾಟನಾಳ, ಡಿ.ಐ. ನಾಲಬಂದ, ಅಬ್ಬಾಸ್ ಕೆ. ನಾಲಬಂದ, ವಿಜಯ ಚಲವಾದಿ, ಕೆ.ಎಚ್. ಪಠಾಣ, ಎಸ್.ಬಿ. ಕಲ್ಲನಗೌಡ್ರ, ಎಂ.ಕೆ. ಭೈರಕದಾರ, ಜನಾಬ ಬೇಪಾರಿ, ಬಿ.ಎಚ್. ಪಠಾಣ, ಎಫ್.ಐ. ಲೋಧಿ, ಇತರರಿದ್ದರು.