ಕೊಪ್ಪಳ: ಪೊಲೀಸರು ಹಾಗೂ ಯೋಧರು ತಮ್ಮ ಜೀವದ ಹಂಗು ತೊರದು ನಮಗಾಗಿ ಸೇವೆ ಸಲ್ಲಿಸುತ್ತಾರೆ. ಸೇವೆಯಲ್ಲಿರುವಾಗ ಹುತಾತ್ಮರಾದವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಮಾರ ಡಿ.ಕೆ.ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1959ರಲ್ಲಿ ಭಾರತ, ಚೀನಾ ನಡುವೆ ಸಂಘರ್ಷ ನಡೆಯುತ್ತದೆ. ಆಧುನಿಕ ಶಸ್ತ್ರಾಸ್ತ್ರ ಹೊಂದಿದ ಚೀನಾ ಸೈನಿಕರು ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಮಾಡಿದರು. ಅವರೊಂದಿಗೆ ಹೋರಾಡಿ ಹುತಾತ್ಮರಾದವರ ನೆನಪಿಗಾಗಿ ಹುತಾತ್ಮ ದಿನ ಆಚರಿಸಲಾಗುತ್ತದೆ.
ಸಮಾಜದ ಸ್ವಾಸ್ತ್ಯ ಕಾಪಾಡಲು ಯೋಧರು, ಪೊಲೀಸರು ತಮ್ಮ ಪ್ರಾಣ ಮುಡುಪಾಗಿಟ್ಟು ಹೋರಾಡುತ್ತಾರೆ. ಅವರ ರಕ್ಷಣೆ ಬಗ್ಗೆ ಸರ್ಕಾರ ಯೋಚಿಸಬೇಕಿದೆ. ಅವರಿಗೂ ಕುಟುಂಬ ಇರುತ್ತದೆ.
ಕರ್ತವ್ಯಕ್ಕೆ ಬಂದಾಗ ಅವರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿ. ಹುತಾತ್ಮರಿಗೆ ಶಾಂತಿ ಕೋರಲು ಅವಕಾಶ ಕೊಟ್ಟಿದ್ದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದಗಳು ಎಂದರು.
ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ದೇಶಾದ್ಯಂತ ಕಳೆದ ಒಂದು ವರ್ಷದಲ್ಲಿ ಕರ್ತವ್ಯ ವೇಳೆ 183 ಪೊಲೀಸರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 16 ಜನ ಹುತಾತ್ಮರಾಗಿದ್ದಾರೆ. ರಾಷ್ಟ್ರಾದ್ಯಂತ ಇಂದು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪವಂದನೆ ಸಲ್ಲಿಸಿದರು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮೌನಾಚರಣೆ ಮಾಡಿ ವಂದಿಸಲಾಯಿತು.
ಗಣ್ಯರಾದ ಶಾಂತಣ್ಣ ಮುದಗಲ್, ಮುದಿಯಪ್ಪ ಕವಲೂರು, ರಾಜಶೇಖರ್ ಆಡೂರು, ಡಿವೈಎಸ್ಪಿಗಳಾದ ಶರಣಪ್ಪ ಸುಬೇದಾರ, ಸಿದ್ದಲಿಂಗಪ್ಪಗೌಡ ಪಾಟೀಲ್, ಸಿಪಿಐಗಳಾದ ಮಹಾಂತೇಶ ಸಜ್ಜನ, ಮೌನೇಶ್ವರ ಪಾಟೀಲ್, ಸುರೇಶ ಹಾಗೂ ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಅವರ ಕುಟುಂಬದವರಿದ್ದರು.