ಜಿಲ್ಲೆ

ಕೋಟತಟ್ಟು ಕೊರಗ ಸಮುದಾಯದ ಮೆಹಂದಿ ಸಮಾರಂಭಕ್ಕೆ ಪೊಲೀಸ್ ದಾಳಿ, ಲಾಠಿಚಾರ್ಜ್; ಎಸ್‌ಐ ವಿರುದ್ಧ ಆಕ್ರೋಶ

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆ ದಾಳಿ ನಡೆಸಿದ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಮದುಮಗ ಸಹಿತ ನಾಲ್ವರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೋಟತಟ್ಟು ಕೊರಗ ಕಾಲನಿಯ ಕೊರಗ ಸಮುದಾಯದ ರಾಜೇಶ್ ಎಂಬುವರ ಮದುವೆ ಡಿ.29ರಂದು ಕುಮಟಾದಲ್ಲಿ ಆಯೋಜಿಸಿದ್ದು, ಸೋಮವಾರ ರಾತ್ರಿ ಮಧುರಂಗಿ ಶಾಸ್ತ್ರ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ ಡಿಜೆ ಸೌಂಡ್ ಅಳವಡಿಸಿ ಸಂಭ್ರಮಿಸುತ್ತಿರುವುದರ ವಿರುದ್ಧ ಸ್ಥಳೀಯರೊಬ್ಬರು ಆಕ್ಷೇಪಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಕೋಟ ಪೋಲಿಸರು ಸ್ಥಳದಲ್ಲಿದ್ದವರ ಮೇಲೆ ಲಾಠಿ ಚಾರ್ಜ್ ನಡೆಸಿ ಮದುಮಗ ರಾಜೇಶ ಸಹಿತ ನಾಲ್ವರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರಾತ್ರಿ 1 ಗಂಟೆವರೆಗೂ ಠಾಣೆಯಲ್ಲಿ ಸ್ಥಳೀಯರೊಂದಿಗೆ ಕೊರಗ ಸಮುದಾಯದವರು ಪ್ರತಿಭಟನೆ ನಡೆಸಿ ಪೊಲೀಸ್ ವಶದಲ್ಲಿದ್ದವರನ್ನು ಕೆರೆದುಕೊಂಡು ಮನೆಗೆ ಹಿಂತಿರುಗಿದ್ದರು.

ಸ್ಥಳೀಯರ ಆಕ್ರೋಶ: ಮೆಹಂದಿ ಕಾರ್ಯಕ್ರಮ ನಡೆಸುತ್ತಿದ್ದ ಆದಿವಾಸಿ ಕೊರಗ ಸಮುದಾಯದವರ ಮೇಲೆ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಸ್ಥಳೀಯರು ಮಂಗಳವಾರ ಕೊರಗ ಕಾಲನಿಗೆ ಭೇಟಿ ನೀಡಿದರು. ಪ್ರಕರಣದಲ್ಲಿ ಭಾಗಿಯಾದ ಠಾಣಾಧಿಕಾರಿ ಸಂತೋಷ್ ಬಿ.ಪಿ. ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಳಂಬ ನೀತಿ ಅನುಸರಿಸಿದರೆ ತೀವ್ರ ಹೋರಾಟ ನಡೆಸುವುದಾಗಿ ಕೊರಗ ಸಮುದಾಯದ ಮುಖಂಡ ಗಣೇಶ್ ಕೊರಗ ಹಾಗೂ ದಲಿತ ಸಂಘರ್ಷ ಸಮಿತಿ ಘೋಷಿಸಿದೆ.

ಮಹಿಳೆಯರ ಮೇಲೂ ದೌರ್ಜನ್ಯ: ಮಹಿಳೆಯರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಕ್ಕಳನ್ನು ಕಣ್ಣೆದುರಲ್ಲೆ ಎಳೆದೊಯುವ ಸಂದರ್ಭದಲ್ಲಿ ಅಧಿಕಾರಿಗಳ ಕಾಲು ಹಿಡಿದು ಬಿಡಿ ಎಂದು ಅಂಗಲಾಚಿದರೂ ಲಾಠಿ ಬೀಸಿ ದರ್ಪ ಮೆರೆದಿದ್ದಾರೆ ಎಂದು ಕೊರಗ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊರಗ ಸಮುದಾಯದ ಮುಖಂಡ ಬಾರ್ಕೂರು ಗಣೇಶ್ ಕೊರಗ ಅವರನ್ನು ಪೊಲೀಸರು ಎಳೆದಾಡಿ ಕಪಾಳಕ್ಕೆ ಹೊಡೆದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಗೆ ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಠಾಣೆ ಎದುರು ಜಮಾಯಿಸಿದ ಜನ: ಪೊಲೀಸರ ವಿರುದ್ಧ ಆಕ್ರೋಶಗೊಂಡ ಕೊರಗ ಸಮುದಾಯದವರು ನಡುರಾತ್ರಿ ಎನ್ನದೆ ಠಾಣೆಗೆ ಜಮಾಯಿಸಿ ಪೊಲೀಸರ ಕ್ರಮವನ್ನು ಖಂಡಿಸಿದರು. ಪೊಲೀಸ್ ವಶದಲ್ಲಿರುವವರನ್ನು ಕೂಡಲೇ ಕಳುಹಿಸಬೇಕು. ಇಲ್ಲವಾದಲ್ಲಿ ಇಲ್ಲೆ ಕೂರುವುದಾಗಿ ಪ್ರತಿಭಟಿಸಿದರು. ಕುಂದಾಪುರ ತಾಲೂಕು ಕೊರಗ ಮುಖಂಡ ಗಣೇಶ್ ಕೊರಗ ಹಾಗೂ ಸ್ಥಳೀಯ ಮುಖಂಡ ವಕೀಲ ಪ್ರಮೋದ್ ಹಂದೆ, ರತ್ನಾಕರ್ ಬಾರಿಕೆರೆ ನೇತೃತ್ವದಲ್ಲಿ ಸಂಧಾನ ಸಭೆ ಏರ್ಪಡಿಸಿ ವಶದಲ್ಲಿದ್ದವರನ್ನು ಕಳುಹಿಸಿ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದರೂ ಮಂಗಳವಾರ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಂಗಳವಾರ ಸ್ಥಳಕ್ಕೆ ಬ್ರಹ್ಮವಾರ ವತ್ತ ನಿರೀಕ್ಷಕ ಅನಂತಪದ್ಮನಾಭ ಭೇಟಿ ನೀಡಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದು ಪೂರ್ಣಪ್ರಮಾಣದ ತನಿಖೆ ನಡಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಲಾಠಿ ಚಾರ್ಜ್ ಮಾಡಿಲ್ಲ ಎಂದ ಎಸ್‌ಐ: ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ ಬಗ್ಗೆ ಸ್ಥಳೀಯರೊಬ್ಬರ ದೂರಿನ ಅನ್ವಯ ರಾತ್ರಿ 10 ಗಂಟೆಗೆ ಠಾಣೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಡಿಜೆ ಬಂದ್ ಮಾಡುವಂತೆ ಸೂಚಿಸಲಾಗಿದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮ ಸ್ಥಳಕ್ಕೆ ನಮ್ಮ 112 ವಾಹನ ಭೇಟಿ ನೀಡಿ ಪುನಃ ಬಂದ್ ಮಾಡುವಂತೆ ಸೂಚಿಸಿದರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಡಿಜೆ ಧ್ವನಿರ್ವಧಕದ ಅಬ್ಬರ ಬಗ್ಗೆ 10.30ರ ವೇಳೆ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು, ಸೌಂಡ್ ಬಂದ್ ಮಾಡುವಂತೆ ಸೂಚಿಸಿದರೂ ನಿರ್ಲಕ್ಷೃ ತೋರಿದ್ದಾರೆ. ನಾವೇ ಬಂದ್ ಮಾಡಲು ಹೋದಾಗ ನಮ್ಮ ಮೇಲೆ ದಾಳಿಗೆ ಮುಂದಾಗಿದ್ದು, ನೂಕುನುಗ್ಗಲಿನಿಂದ ಕೆಲವರಿಗೆ ಗಾಯವಾಗಿದೆ. ಲಾಠಿ ಚಾರ್ಜ್ ಆರೋಪ ಸುಳ್ಳು ಎಂದು ಠಾಣಾಧಿಕಾರಿ ಸಂತೋಷ್ ಬಿ.ಪಿ. ತಿಳಿಸಿದ್ದಾರೆ.