ಜಿಲ್ಲೆ

ಸಮಾಜದಲ್ಲಿ ಪೊಲೀಸರ ಸೇವೆ ಶ್ಲಾಘನೀಯ: ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಮವಸ್ತ್ರ ಧರಿಸಿ ಸಮಯದ ಇತಿಮಿತಿ ಇಲ್ಲದೇ, ಕುಟುಂಬವನ್ನು ಲೆಕ್ಕಿಸದೇ ಸಮಾಜಕ್ಕಾಗಿ ಕೆಲಸ ಮಾಡುವ ಪೊಲೀಸರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಪ್ರಾಣತೆತ್ತ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಹುತಾತ್ಮರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗೌರವಿಸಿದರೆ ನಮ್ಮ ದೇಶ ಹಾಗೂ ಸಂವಿಧಾನದ ಗೌರವ ಹೆಚ್ಚಾಗುತ್ತದೆ ಎಂದರು.

ಕಾರ್ಯಾಂಗ ನ್ಯಾಯಾಂಗ, ಶಾಸಕಾಂಗದ ಜತೆಗೆ ಸೈನಿಕ, ಕೃಷಿಕ, ಶಿಕ್ಷಕ, ಆರಕ್ಷಕ ದೇಶದ ನಾಲ್ಕೂ ಆಧಾರ ಸ್ತಂಭಗಳೆನ್ನಬಹುದು. ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದರೆ, ಆರಕ್ಷಕರು ದೇಶದ ಒಳಗೆ ನಿಂತು ನಮಗೆ ರಕ್ಷಣೆ ಕೊಡುತ್ತಾರೆ. ಸಮಾಜವನ್ನು ಶಾಂತಿ ಸುವ್ಯವಸ್ಥಿತಯತ್ತ ಕೊಂಡೊಯ್ಯುತ್ತಾರೆ. ಹಾಗಾಗಿ ಸೈನಿಕರಷ್ಟೇ ಆರಕ್ಷಕರ ಪಾತ್ರವೂ ಕೂಡ ಗೌರವ ಸೂಚಕವಾಗಿದೆ. ಪೊಲೀಸರು ಸಮಾಜವನ್ನೇ ತಮ್ಮ ಕುಟುಂಬ ಎಂದು ಕೆಲಸ ನಿರ್ವಹಿಸುತ್ತಾರೆ. ಕರ್ತವ್ಯ ನಿಷ್ಠೆ ಹಾಗೂ ಸಮಯಪಾಲನೆ, ಶಿಸ್ತು, ವಿನಯತೆ, ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಾರೆ. ಪೊಲೀಸರು ತಮ್ಮ ವೈಯಕ್ತಿಕ ಬದುಕಿನ ಕಡೆಗೂ ಗಮನಕೊಟ್ಟು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು

ಇತ್ತೀಚೆಗೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತವಾದಾಗ ನಮ್ಮ ಆರಕ್ಷಕ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೆ ಕಾರಿನ ಗಾಜನ್ನು ಹೊಡೆದು ಸಾರ್ವಜನಿಕರ ಪ್ರಾಣ ಉಳಿಸಿದರು. ಇದು ಅವರ ಸಮಾಜದ ಕಳಕಳಿಯನ್ನು ಸೂಚಿಸಿತ್ತದೆ. ಅಪಘಾತದಲ್ಲಿ ರಕ್ಷಣಾ ಕಾರ್ಯ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾಡಳಿತ ವತಿಯಿಂದ ಗೌರವಿಸಲಾಗಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಮಾತನಾಡಿ, ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಸಮಾಜದ ನಿರ್ವಹಣೆಗೆ ಹಲವಾರು ಇಲಾಖೆಗಳಿವೆ. ಆದರೆ ಇದರಲ್ಲಿ ಸೇನೆ ಹಾಗೂ ಪೊಲೀಸ್ ಇಲಾಖೆ ವಿಶೇಷ. ಹುತಾತ್ಮರಿಗೆ ನಮನ ಸಲ್ಲಿಸುವ ಪದ್ಧತಿ ಸೇನೆ ಹಾಗೂ ಪೊಲೀಸ್ ಇಲಾಖೆಯಲ್ಲಿದೆ. ಇದಕ್ಕೆ ಅಭಿನಂದನೆಗಳು ಎಂದರು.

ಸಮಾಜದ ನಿರ್ವಹಣೆಗೆ ಎಲ್ಲ ರಂಗಗಳು ಮುಖ್ಯವಾಗುತ್ತದೆ. ಹಾಗೂ ಶಾಂತಿಯುತ ನಿರ್ವಹಣೆ ಹಾಗೂ ಸುವ್ಯವಸ್ಥೆಗೆ ಎಲ್ಲರೂ ಮುಖ್ಯ. ಸಮಾಜಕ್ಕೆ ಸೇವೆ ಸಲ್ಲಿಸುವುದು ಎಲ್ಲರ ಮನೋಭಾವವಾಗಿರಬೇಕು. ಸೇವೆಯಲ್ಲಿ ಪ್ರಾಣ ತೆತ್ತವರು ಮಾತ್ರವಲ್ಲ, ಕರ್ತವ್ಯವನ್ನು ಪ್ರಾಮಾಣಿಕ ಹಾಗು ಕರ್ತವ್ಯ ನಿಷ್ಠೆಯಿಂದ ಮಾಡಿದರೂ ಕೂಡ ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಇತರರಿದ್ದರು. ಇದೇ ವೇಳೆ ಹುತಾತ್ಮ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು. ಅಂತೆಯೇ ಹುತಾತ್ಮ ಸಿಬ್ಬಂದಿಯ ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.