ಜಿಲ್ಲೆ

ಬಾಲಕಿಯರನ್ನು ಪಾಲಕರಿಗೆ ಒಪ್ಪಿಸಿದ ಪೊಲೀಸರು

ಹುಬ್ಬಳ್ಳಿ: ಶಾಲೆಗೆ ಹೋಗದೆ ಬಸ್ ಹತ್ತಿ ಬೆಂಗಳೂರಿಗೆ ತೆರಳಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿರುವ ಬೆಂಡಿಗೇರಿ ಠಾಣೆ ಪೊಲೀಸರು , ಅವರ ಪಾಲಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಸಂಜನಾ(13), ಅನನ್ಯ (15) (ಹೆಸರು ಬದಲಾಯಿಸಲಾಗಿದೆ) ಇಬ್ಬರನ್ನು ಹುಬ್ಬಳ್ಳಿಗೆ ಕರೆತಂದು ಪಾಲಕರಿಗೆ ಒಪ್ಪಿಸಿದ್ದಾರೆ.

ಮಂಗಳವಾರ ಶಾಲೆಗೆ ಹೋಗದೆ ಗೋಕುಲ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಬೆಂಗಳೂರಿಗೆ ತೆರಳಿದ್ದಾರೆ. ಸಂಜೆಯಾದರೂ ಶಾಲೆಯಿಂದ ಮಕ್ಕಳು ಬಾರದ ಹಿನ್ನೆಲೆಯಲ್ಲಿ ಪಾಲಕರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಡಿಗೇರಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಿಕ ನೇತೃತ್ವದ ತಂಡ ಬಾಲಕಿಯೊಬ್ಬಳ ಹತ್ತಿರದವಿದ್ದ ಮೊಬೈಲ್ ಫೋನ್ ಲೊಕೇಷನ್ ಆಧಾರದಲ್ಲಿ ಬೆಂಗಳೂರಿನಲ್ಲಿರುವುದ್ನನು ಪತ್ತೆ ಹಚ್ಚಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರ ಸಹಾಯದ ಮೇರೆಗೆ ಮಕ್ಕಳನ್ನು ರಕ್ಷಿಸಿ, ಬುಧವಾರ ಬೆಳಗ್ಗೆ ಹುಬ್ಬಳ್ಳಿ ಪೊಲೀಸರು ಹುಬ್ಬಳ್ಳಿಗೆ ಕರೆತಂದಿದ್ದಾರೆ. ಮಕ್ಕಳು ಬೆಂಗಳೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗುವ ಆಸೆಯಿಂದ ಹೇಳದೆ ಕೇಳದೆ ಬಸ್ ಹತ್ತಿ ಹೋಗಿರುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.