ಮೈಸೂರು: ಎಸಿಪಿ ಗಜೇಂದ್ರಪ್ರಸಾದ್, ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದ ಪೊಲೀಸ್ ತಂಡ ಬುಧವಾರ ಮಧ್ಯಾಹ್ನ ವಿಜಯನಗರದ ಮನೋರಂಜನ್ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಮನೋರಂಜನ್ ಮೈಸೂರಿನವನು ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಆತನ ನಿವಾಸಕ್ಕೆ ತೆರಳಿದರು. ಅಲ್ಲದೆ, ಮನೆಯ ಬಳಿ ಪೊಲೀಸರನ್ನು ನಿಯೋಜಿಸಿದರು. ಮನೋರಂಜನ್ ಪಾಲಕರ ಬಳಿ ಮಾಹಿತಿ ಪಡೆದುಕೊಂಡು, ಆತನ ಕೊಠಡಿ, ಆತ ಓದುತ್ತಿದ್ದ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಜತೆಗೆ ಆತ ಓದಿದ ಶಾಲೆ, ಸ್ನೇಹಿತರ ಬಗ್ಗೆಯೂ ಮಾಹಿತಿ ಕಲೆಹಾಕಿದರು ಎನ್ನಲಾಗಿದೆ. ಮನೋರಂಜನ್ ತನ್ನ ಕೊಠಡಿಯಲ್ಲಿ ಇರಿಸಿಕೊಂಡಿದ್ದ ಕಾದಂಬರಿ, ಹೋರಾಟ, ಅಪರಾಧ ಸಂಬಂಧಿತ ಹತ್ತಾರು ಪುಸ್ತಕಗಳನ್ನು ಪರಿಶೀಲಿಸಿದ ಪೊಲೀಸರು, ಅವುಗಳನ್ನು ವಶಕ್ಕೆ ಪಡೆದುಕೊಂಡು ತೆರಳಿದರು. ಜತೆಗೆ, ಅಕ್ಕಪಕ್ಕದ ನಿವಾಸಿಗಳ ಬಳಿಯೂ ಮನೋರಂಜನ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.