ಯಕ್ಸಂಬಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಕ್ಕೋಡಿ ಡಿವೈಎಸ್‌ಪಿ ಮನೋಜ ಪಾಟೀಲ ಅವರನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನಿಸಿದರು. ಸಚಿವೆ ಶಶಿಕಲಾ ಜೊಲ್ಲೆ , ಯುವ ಮುಖಂಡ ಬಸವಪ್ರಸಾದ ಜೊಲ್ಲೆ, ಶಾಂಭವಿ ಅಶ್ವಥಪುರ ಇತರರು ಇದ್ದರು. 
ಜಿಲ್ಲೆ

ಪೊಲೀಸರ ಕಾರ್ಯವೈಖರಿ ಶ್ಲಾಘನೀಯ

ಚಿಕ್ಕೋಡಿ: ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಆವರಣದಲ್ಲಿರುವ ಜ್ಯೋತಿಬಾ ದೇವಸ್ಥಾನದಲ್ಲಿನ ಆಭರಣ ಕಳವು ಮಾಡಿದ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ಚಿಕ್ಕೋಡಿ ಪೋಲಿಸ್ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಯಕ್ಸಂಬಾ ಪಟ್ಟಣದ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ಜ್ಯೋತಿಬಾ ಜಾತ್ರಾ ಮಹೋತ್ಸವ, ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಹುಟ್ಟು ಹಬ್ಬದ ನಿಮಿತ್ತ ಸೋಮವಾರ ಹಮ್ಮಿಕೊಂಡ ಸಮಾರಂಭದಲ್ಲಿ ಡಿವೈಎಸ್‌ಪಿ ಮನೋಜ ಪಾಟೀಲ ನೇತೃತ್ವದ ತಂಡವನ್ನು ಸತ್ಕರಿಸಿ ಮಾತನಾಡಿ, ಚಿಕ್ಕೋಡಿ ಪಿಎಸ್‌ಐ ರಾಜೇಶ ಬಗಲಿ ಅವರು ವಿಶೇಷವಾಗಿ ಟೆಕ್ನಿಕಲ್ ತನಿಖಾ ತಂಡ ರಚನೆ ಮಾಡಿ ಕೇವಲ 15 ದಿನಗಳಲ್ಲಿ ಕಳ್ಳರನ್ನು ಹಿಡಿದಿದ್ದಾರೆ ಎಂದರು.

ಡಿವೈಎಸ್‌ಪಿ ಮನೋಜ ಪಾಟೀಲ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್‌ಐಗಳಾದ ಆರ್.ಆರ್.ಬಗಲಿ, ರಾಜಶೇಖರ ಬೀಳಗಿ ಅವರನ್ನು ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಪರವಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನಿಸಿದರು. ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಕಲ್ಲಪ್ಪ ಜಾಧವ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪುರ ಇತರರು ಉಪಸ್ಥಿತರಿದ್ದರು. ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು.