ಬೆಳಗಾವಿ : ಯಾವುದೇ ಜಾತಿ, ಧರ್ಮ ಹಾಗೂ ಸಂಬಂಧಗಳ ಹಂಗಿಲ್ಲದೇ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಕಾನೂನು ಪಾಲನೆಯನ್ನೇ ಜವಾಬ್ದಾರಿಯನ್ನಾಗಿಸಿಕೊಂಡಿರುವ ಪೊಲೀಸ್ ಇಲಾಖೆಯ ಮೇಲೆ ಸಮಾಜ ಅಗಾದವಾದ ನಿರೀಕ್ಷೆ ಹಾಗೂ ಗೌರವ ಇಟ್ಟಿದೆ ಎಂದು ನಿವೃತ್ತ ಆರ್ಎಸ್ಐ ಎಂ.ಬಿ.ಮುಷ್ಟಗಿ ಹೇಳಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಗರದಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾನೂನು ಪಾಲನೆಯೇ ಮುಖ್ಯ ಹೊಣೆಯನ್ನಾಗಿಸಿಕೊಂಡಿರುವ ಇಲಾಖೆ ಸಮಾಜ ನಿರೀಕ್ಷೆಗೆ ತಕ್ಕಂತೆ ಹಾಗೂ ಮಾನವೀಯ ಮೌಲ್ಯಗಳಡಿಯಲ್ಲಿ ಕಾರ್ಯನಿರ್ವಹಿಸಿದಾಗ ಪೊಲೀಸರು ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕವರೂ
ಅದೃಷ್ಟಸಾಲಿಗಳು ಎಂದುಕೊಂಡು ಎಂತಹದ್ದೇ ಸವಾಲಿನ ಸನ್ನಿವೇಶದಲ್ಲಿ ಆವೇಶಕ್ಕೆ ಒಳಗಾಗದೇ ಮೇಲಧಿಕಾರಿಗಳ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಕರ್ತವ್ಯ ನಿರ್ವಹಿಸಬೇಕು. ಸಮಾಜದಲ್ಲಿ ಈ ಹಿಂದಿನ ನಮ್ಮೆಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಪಾಡಿಕೊಂಡಿರುವ ಇಲಾಖೆಯ ಗೌರವ ಹಾಗೂ ಘನತೆಗೆ ಚ್ಯುತಿ ಬರದಂತೆ ಕೆಲಸ ಮಾಡಬೇಕು. ನಮ್ಮ ಧೀರ ಪೊಲೀಸ್ ಪಡೆಯ ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವಹೊಂದಿರಬೇಕು ಎಂದರು.
ಐಜಿಪಿ ಎನ್.ಸತೀಶಕುಮಾರ್ ಹಾಗೂ ನಿವೃತ್ತ ಎಆರ್ಎಸ್ಐ ಎ.ಎ.ಕಿಲ್ಲೇದಾರ್ ಮಾತನಾಡಿದರು. ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್ಪಿ ಡಾ.ಸಂಜೀ ಪಾಟೀಲ, ಎಎಸ್ಪಿ ಎಂ.ವೇಣುಗೋಪಾಲ್, ಡಿಸಿಪಿ ಪಿ.ವಿ.ಸ್ನೇಹಾ ಸೇರಿದಂತೆ ಇತರರಿದ್ದರು.