ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಆರೋಪಿಗಳ ಪತ್ತೆಗೆ ಸಹಕರಿಸುತ್ತಿದ್ದ ಶ್ವಾನದಳದ ಸದಸ್ಯೆ ಸುಧಾ ಶನಿವಾರ ಕೊನೆಯುಸಿರೆಳೆದಿದ್ದಾಳೆ.
ಮೃತ ಶ್ವಾನಕ್ಕೆ ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸ್ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು. ಬಿಳಿ ವಸ್ತ್ರದಲ್ಲಿ ಮೃತದೇಹವನ್ನು ಸುತ್ತಿ, ಹೂವಿನಿಂದ ಅಲಂಕರಿಸಿ ಪೊಲೀಸ್ ವಾದ್ಯ, ಕುಶಾಲ ತೋಪು ಸಿಡಿಸುವ ಮೂಲಕ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಇತರ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತಿಯಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಪೊಲೀಸ್ ಮೈದಾನದ ಅಂಚಿನಲ್ಲಿ ಹೂಳುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿ, ತುಳಸಿ ಗಿಡ ನೆಟ್ಟು ನೀರೆರೆಯಲಾಯಿತು.
ಡಾಬರ್‌ಮನ್ ಪಿಂಚರ್ ಜಾತಿಗೆ ಸೇರಿದ ಸುಧಾ 2011ರ ಮಾ.15ರಂದು ಜನಿಸಿತ್ತು. ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಯಲ್ಲಿ 2012ರ ಏ.2ರಂದು ಕರ್ತವ್ಯ ಆರಂಭಿಸಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಶ್ವಾನಗಳಲ್ಲಿ ಅತ್ಯಂತ ಸೂಕ್ಷ್ಮಮತಿ ಹಾಗೂ ಚುರುಕಿನ ಶ್ವಾನವಾಗಿತ್ತು. ಕೆಲ ಸಮಯದ ಹಿಂದೆ ಕ್ಯಾನ್ಸರ್‌ಗೆ ಒಳಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಚೆನ್ನಾಗಿಯೇ ಇದ್ದ ಸುಧಾಳ ಆರೋಗ್ಯ ಒಂದು ವಾರದಿಂದ ಹದಗೆಟ್ಟಿತ್ತು. ಎರಡು ದಿನಗಳಿಂದ ಆಹಾರ ತ್ಯಜಿಸಿತ್ತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಕಣ್ಣೀರಿಟ್ಟ ಸಂದೀಪ್: ಸುಧಾ ಮೂರು ತಿಂಗಳಿನ ಮರಿ ಇರುವಾಗಿನಿಂದ ಸಾಕಿ ಸಲಹಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಸಂದೀಪ್ ಕಣ್ಣೀರಿಡುತ್ತಲೇ ಸುಧಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಸಂದೀಪ್‌ಗೆ ಸುಧಾ ಜತೆಗಿನ ನಂಟು ಅದೆಷ್ಟು ಗಾಢವಾಗಿತ್ತೆಂದರೆ ಕೆಲ ಸಮಯದ ಹಿಂದೆ ತಾವು ಖರೀದಿಸಿದ್ದ ಹೊಸ ಬೈಕ್‌ಗೂ ಅವರು ಸುಧಾಳ ಹೆಸರನ್ನಿಟ್ಟಿದ್ದಾರೆ.
ಸುಧಾ ಅತ್ಯಂತ ಚುರುಕಿನ ಶ್ವಾನ. ಅರ್ಧ ತಾಸು ಎಲ್ಲಿಯಾದರೂ ಹೊರ ಹೋಗುವುದಾದರೂ ನಾನೆಲ್ಲಿ ಕುಳ್ಳಿರಿಸಿ ಹೋಗುತ್ತೇನೋ ಅಲ್ಲೇ ನನಗಾಗಿ ಕಾಯುತ್ತಿದ್ದಳು. ಅತ್ಯಂತ ಸೂಕ್ಷ್ಮಮತಿಯವಳಾಗಿದ್ದ ಸುಧಾ ಹಲವಾರು ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು ಪ್ರಕರಣ ಭೇದಿಸಲು ಸಹಕರಿಸಿದ್ದಾಳೆ ಎಂದು ಸಂದೀಪ್ ಪ್ರತಿಕ್ರಿಯಿಸಿದರು.