ಜಿಲ್ಲೆ

ಸುಗಮ ಚುನಾವಣೆಗೆ ಪೊಲೀಸ್ ಇಲಾಖೆ ಸನ್ನದ್ಧ

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈಗಾಗಲೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಈ ನಡುವೆ ಚುನಾವಣೆಯಲ್ಲಿ ಸಂಭಾವ್ಯ ಅಡ್ಡಿ-ಆತಂಕ ತಪ್ಪಿಸಲು ಪೊಲೀಸ್ ಇಲಾಖೆಯೂ ಸನ್ನದ್ಧವಾಗಿದೆ. ರೌಡಿಶೀಟರ್, ದೊಂಬಿ, ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಹೆಡೆಮುರಿಕಟ್ಟಲು ಮಾಹಿತಿ ಕಲೆ ಹಾಕುತ್ತಿದೆ.

ರೌಡಿಶೀಟರ್​ಗಳು, ಸಮಾಜಘಾತುಕ ಶಕ್ತಿಗಳಿಂದ ಚುನಾವಣೆಗೆ ಅಡ್ಡಿ ಆತಂಕ ಎದುರಾಗುವ ಸಾಧ್ಯತೆ ಇದ್ದೇ ಇದೆ. ತಮಗೆ ಬೇಕಾದವರಿಗೆ ಮತದಾನ ಮಾಡುವಂತೆ ಒತ್ತಡ ಹೇರುವುದು, ಬೆದರಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಈ ಸಂಗತಿಯನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇಂಥವರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.

ಪರಿಣಾಮ ಜ. 2ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ರಾಜ್ಯದ ಎಲ್ಲ ಠಾಣೆಗಳಿಗೆ ಅಗತ್ಯ ಮಾಹಿತಿ ಕೋರಿ ಪತ್ರ ರವಾನೆಯಾಗಿದೆ. ಲೋಕಸಭೆ ಚುನಾವಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಕೂಡದು. ಸಂಭಾವ್ಯ ಅಚಾತುರ್ಯ ತಪ್ಪಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಸನ್ನದ್ಧವಾಗುವಂತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರತಿ ವಾರಕ್ಕೊಮ್ಮೆ ಅಗತ್ಯ ಮಾಹಿತಿಯ ಪರಿಶೀಲನೆ ನಡೆಸಿ, ಸೂಕ್ತ ಕ್ರಮದ ಮಾರ್ಗದರ್ಶನವನ್ನೂ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ನೀಡಲಾಗುತ್ತದೆ.

ಪ್ರಮುಖವಾಗಿ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಶೀಟರ್​ಗಳು, ರೌಡಿಶೀಟ್ ಓಪನ್ ಆದ ದಿನಾಂಕ, ಇವರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವುದು, ಇತ್ತೀಚಿನ ದಿನಗಳಲ್ಲಿ ಎಸಗಿದ ಕ್ರಿಮಿನಲ್ ಕೃತ್ಯ, ಗೂಂಡಾ ಆಕ್ಟ್ ಇದ್ದಲ್ಲಿ ಸದ್ಯದ ಚಲನವಲನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಮಹಾನಿರ್ದೇಶಕರ ಕಚೇರಿಯಿಂದ ಕೇಳಲಾಗಿದೆ.

ಇದರೊಟ್ಟಿಗೆ 2014, 2018, 2019, 2023ರ ಸಾರ್ವತ್ರಿಕ ಚುನಾವಣೆಯ ವೇಳೆಯಲ್ಲಿ ಅಪರಾಧಿ ಕೃತ್ಯದಲ್ಲಿ ತೊಡಗಿದ್ದವರ ಮಾಹಿತಿ, ಅವರ ಮೇಲಿರುವ ಕೇಸ್​ಗಳು ಯಾವವು? ಅಪರಾಧ ಸಾಬೀತಾದ ಪ್ರಕರಣಗಳು, ಬಿ ಮತ್ತು ಸಿ ರಿಪೋರ್ಟ್ ಹಾಕಿದ್ದರೆ ಅದರ ಮಾಹಿತಿಯನ್ನೂ ಕೇಳಲಾಗಿದೆ. ಲಾಂಗ್ ಪೆಂಡಿಂಗ್ ಕೇಸ್​ನಲ್ಲಿದ್ದವರು, ಬಾಕಿ ಉಳಿದ ಎನ್​ಬಿಡಬ್ಲ್ಯೂ ಪ್ರಕರಣ ಸೇರಿದಂತೆ ಒಟ್ಟಾರೆ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾದವರ ಹಾಗೂ ಭಾಗಿಯಾವ ಸಾಧ್ಯತೆ ಉಳ್ಳವರ ಪರಿಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ತನ್ಮೂಲಕ ಇಂಥವರನ್ನು ಹೆಡೆಮುರಿ ಕಟ್ಟಿ ಲೋಕಸಭೆ ಚುನಾವಣೆ ಸುಮಗವಾಗಿಸಲು ಪೊಲೀಸ್ ಇಲಾಖೆಯಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಸಿಬ್ಬಂದಿ ಮಾಹಿತಿ

ಚುನಾವಣೆ ವೇಳೆ ಭದ್ರತೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯ ಅಗತ್ಯವಿರುತ್ತದೆ. ಹೀಗಾಗಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳು ಯಾವವು? ಅಲ್ಲಿ ಅಗತ್ಯವಿರುವ ಸಿಬ್ಬಂದಿ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನೂ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಕೇಳಲಾಗಿದೆ.