ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಲಾರಿ ಚಾಲಕನೊಬ್ಬನ ಬಳಿ ದಸರಾ ಬೋನಸ್ ಆಗಿ 25 ಸಾವಿರ ರೂ.ನೀಡುವಂತೆ ತ್ಯಾಮಗೊಂಡ್ಲು ಠಾಣೆ ಪೊಲೀಸರು ಬೇಡಿಕೆ ಇಟ್ಟ ಪ್ರಕರಣ ಡಿವೈಎಸ್‌ಪಿ ಕಚೇರಿ ಮೆಟ್ಟಿಲೇರಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತನಿಖೆಗೆ ಆದೇಶಿಸಿದ್ದಾರೆ.
ಏನಿದು ಪ್ರಕರಣ? ಅ.18 ರಂದು ್ಲ ಇಸ್ಲಾಂಪುರದ ಲಾರಿ ಚಾಲಕ ನವೀದ್ ತನ್ನ ಲಾರಿಯಲ್ಲಿ ಕೊರಟಗೆರೆ ಬಳಿಯ ರಾಮೇನಹಳ್ಳಿಗೆ ಚಪ್ಪಡಿ ಕಲ್ಲುಗಳನ್ನು ಸಾಗಿಸುತ್ತಿದ್ದರು. ಮಾರ್ಗ ಮಧ್ಯೆ ಲಾರಿ ತಡೆದ ತ್ಯಾಮಗೊಂಡ್ಲು ಠಾಣೆ ಪೇದೆ, ಲಾರಿ ಸಹಿತ ನವೀದ್‌ನನ್ನು ಠಾಣೆಗೆ ಕರೆತಂದಿದ್ದರು. ಬಳಿಕ ಸಬ್ ಇನ್ಸ್‌ಸ್ಪೆಕ್ಟರ್ ಮತ್ತು ಪೇದೆ ಇಬ್ಬರೂ ನವೀದ್ ಬಳಿ ದಸರಾ ಹಬ್ಬದ ಪ್ರಯುಕ್ತ 25ಸಾವಿರ ರೂ.ಹಣಕ್ಕೆ ಬೇಡಿಕೆ ಇಟಿದ್ದರು ಎನ್ನಲಾಗಿದೆ. ಲಾರಿ ಚಾಲಕ ಹಣ ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಲಾಠಿಯಿಂದ ಹಲ್ಲೆ ಮಾಡಿ ಲಾರಿ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸಬ್ ಇನ್ಸ್‌ಸ್ಪೆಕ್ಟರ್ ಮತ್ತು ಪೇದೆ ವಿರುದ್ಧ ಡಿವೈಎಸ್‌ಪಿ ಕಚೇರಿಯಲ್ಲಿ ನವೀದ್ ದೂರು ನೀಡಿದ್ದಾರೆ.
ರಕ್ಷಕರಿಂದಲೇ ಸುಲಿಗೆ: ಈ ಹಿಂದೆಯೂ ಲಾರಿಯಲ್ಲಿ ಚಪ್ಪಡಿ ಕಲ್ಲು ಸಾಗಿಸುತ್ತಿದ್ದಾಗ ಇದೇ ರೀತಿ ಮಾಡಿದ್ದರು. ಕಾನೂನು ರಕ್ಷಕರಾದ ಪೊಲೀಸರೇ ದಸರಾ ಹಬ್ಬದ ನೆಪದಲ್ಲಿ ನಮ್ಮಂತ ಕೂಲಿ ಕಾರ್ಮಿಕರಿಂದ ಹಣ ಸುಲಿಗೆ ಮಾಡಲು ಹೊರಟಿರುವುದು ಬೇಸರದ ಸಂಗತಿ. ಹಣ ನೀಡದ್ದಕ್ಕೆ ಲಾಠಿಯಿಂದ ಹೊಡೆದು ದೌರ್ಜನ್ಯ ಎಸಗಿದ್ದಾರೆ ಎಂದು ಲಾರಿ ಚಾಲಕ ನವೀದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಸ್‌ಪಿ ಆದೇಶ:
ಈ ಪ್ರಕರಣ ಸಂಬಂಧ ನೆಲಮಂಗಲ ಉಪವಿಭಾಗ ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ವಿಚಾರಣೆ ಮಾಡುವಂತೆ ಸೂಚನೆ ನೀಡಲಾಗಿದೆ. ವಿಚಾರಣೆ ಬಳಿಕ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ಬಾಲದಂಡಿ ಪ್ರತಿಕಿಯಿಸಿದ್ದಾರೆ.