ಜಿಲ್ಲೆ

ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿಕೆ; ಅಪರಾಧ ಮುಕ್ತ ಸಮಾಜ ರೂಪಿಸಲು ಸಹಕರಿಸಿ

ಮಂಜುನಾಥ ಅಂಗಡಿ

ಧಾರವಾಡ: ಶಾಂತಿ, ಸುವ್ಯವಸ್ಥೆ ಕಾಪಾಡುವುದು, ಪ್ರತಿಯೊಬ್ಬರಲ್ಲೂ ಸುರಕ್ಷತೆ ಭಾವ ಮೂಡಿಸುವುದು ಮತ್ತು ಕಾನೂನುಗಳ ಬಗ್ಗೆ ಯುವ ಸಮುದಾಯ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಮಹಾನಗರದ ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಪೊಲೀಸ್ ದಿನ ಆಚರಿಸಲು ನಿರ್ಧರಿಸಲಾಗಿದೆ. ಈ ವಿಶೇಷ ಕಾರ್ಯಕ್ಕೆ ಕೈ ಜೋಡಿಸಿ ಅಪರಾಧ ಮುಕ್ತ ಸಮಾಜ ರೂಪಿಸಲು ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.
ನಗರದ ವಿದ್ಯಾಗಿರಿ ಜೆಎಸ್‌ಎಸ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪೊಲಿಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ಸಮವಸ್ತç ಧರಿಸಿರುವ ಸಾರ್ವಜನಿಕರು. ಸಾರ್ವಜನಿಕರು ಸಮವಸ್ತç ಧರಿಸದ ಪೊಲೀಸರು. ಎಲ್ಲರೂ ಸಾಮಾಜಿಕ ಬದ್ಧತೆ ಮತ್ತು ರಾಷ್ಟಪ್ರೇಮದಿಂದ ಕೆಲಸ ಮಾಡಬೇಕು. ಉತ್ತಮ ನಾಗರಿಕರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಅಪರಾಧಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗಗಳಾಗಿವೆ. ಅವುಗಳನ್ನು ಬಳಸದ ದಿನವಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರವಿರಬೇಕು. ಅರಿವಿನ ಕೊರತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆಗೆ ಒಳಗಾಗುತ್ತಿದ್ದಾರೆ. ಇಂಥ ತೊಂದರೆಗಳು ಎದುರಾದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕವಸ್ತುಗಳಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಮನೆ, ಶಾಲಾ ಹಂತದಲ್ಲಿ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಸರಿಯಾದ ಅರಿವು ಮೂಡಿಸಬೇಕು. ಇದು ಪಾಲಕರ ಕರ್ತವ್ಯ ಎಂದರು.
ಇನ್‌ಸ್ಪೆಕ್ಟರ್ ಶಂಕರಗೌಡ ಬಸನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ್ ಟಿ., ಜೆಎಸ್‌ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಪಿಯು ಕಾಲೇಜ್ ಪ್ರಾಚಾರ್ಯ ವೈ.ಎಸ್. ರಾಯಬಾಗಿ, ಇನ್‌ಸ್ಪೆಕ್ಟರ್‌ಗಳಾದ ಮಲ್ಲನಗೌಡ ನಾಯ್ಕರ, ಸಂಗಮೇಶ ದಿಡಿಗಿನಾಳ, ಎಂ.ಎಸ್. ಹೂಗಾರ, ಪಿಎಸ್‌ಐಗಳು, ಜೆಎಸ್‌ಎಸ್‌ಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಉಪನಗರ ಠಾಣೆ ಪಿಐ ಎನ್.ಸಿ. ಕಾಡದೇವರಮಠ ವಂದಿಸಿದರು.