ಜಿಲ್ಲೆ

ಹೆತ್ತವರ ಮಾತು ಕೇಳದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಸೂಚನೆ

ಮಂಗಳೂರು: ಹೆತ್ತವರ ಮಾತು ಕೇಳುವಂತೆ ಮಕ್ಕಳನ್ನು ಬಾಲ್ಯದಿಂದಲೇ ಬೆಳೆಸಬೇಕು. ಒಂದು ವೇಳೆ ಮಾತು ಕೇಳುವುದೇ ಇಲ್ಲ ಎಂದಾದರೆ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಮನವೊಲಿಸುವ ಕೆಲಸ ಮಾಡಲಿದ್ದಾರೆ ಎಂದು ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹೇಳಿದ್ದಾರೆ.


ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜಪ್ಪಿನಮೊಗರಿನ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಭಾನುವಾರ ನಡೆದ ‘ಅಪ್ರಾಪ್ತ ವಯಸ್ಸಿನ ವಾಹನ ಸವಾರರ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ತಮ್ಮ ವಾಹನ ಕೊಡುವ ಮುನ್ನ ಅದರಿಂದಾಗುವ ಪರಿಣಾಮದ ಕುರಿತು ಯೋಚಿಸಬೇಕು. ವಾಹನ ಚಲಾಯಿಸಿ ಅದರಿಂದ ಅವಘಡ ಸಂಭವಿಸಿದರೆ ಅಥವಾ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಆರ್‌ಸಿ ಯಾರ ಹೆಸರಿನಲ್ಲಿದೆಯೋ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತಿದೆ.


ಕಳೆದ ವಾರ ಮೇರಿಹಿಲ್‌ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಘಟನೆಯ ಬಗ್ಗೆ ಉಲ್ಲೇಖಿಸಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಸ್ಕೂಟರ್ ಚಲಾಯಿಸುತ್ತಿದ್ದ ಬಾಲಕನ ತಂದೆಯ ಮೇಲೆ ಕೇಸ್ ದಾಖಲಿಸಲಾಗಿದೆ. ಒಂದು ಕಡೆ ಮಗನನ್ನು ಕಳೆದು ಕೊಂಡ ನೋವು, ಇನ್ನೊಂದು ಕಡೆ ಕೇಸ್ ಎರಡನ್ನೂ ಅನುಭವಿಸಬೇಕಾದ ಅನಿವಾರ್ಯತೆ ಹೆತ್ತವರಿಗೆ ಬಂದಿದೆ. ಹಾಗಾಗಿ ಮಕ್ಕಳಿಗೆ ವಾಹನ ಕೊಡುವ ಮುನ್ನ ಯೋಚನೆ ಮಾಡಬೇಕು ಎಂದರು.


ಈಗಾಗಲೇ ಶಾಲೆಗಳಿಗೆ ಭೇಟಿ ನೀಡಿ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಆಗುವ ಸಮಸ್ಯೆಗಳ ಕುರಿತಂತೆ ವಿವರಿಸವ ಕೆಲಸಗಳು ಪೊಲೀಸರಿಂದ ನಡೆಯುತ್ತಿದೆ. ಅಪರಾಧ ತಡೆ ಮಾಸಾಚರಣೆ ಸಂದರ್ಭವೂ ಈ ಬಗ್ಗೆ ವಿವರಿಸಲಾಗುತ್ತಿದೆ.

ಪೊಲೀಸ್ ನಿರೀಕ್ಷಕ ರಮೇಶ್ ಎಚ್.ಹಾನಾಪುರ ಅವರು ಮಾತನಾಡಿ, ಒಂದು ಪ್ರಾಣ ಹೋದರೆ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದುರ್ಘಟನೆಗಳು ನಡೆಯುವ ಮುನ್ನವೇ ತಡೆಯುವ ನಿಟ್ಟಿನಲ್ಲಿ ಯೋಚಿಸಬೇಕು. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.ಅಪ್ರಾಪ್ತ ವಯಸ್ಸಿನ ಮಕ್ಕಳ ಹೆತ್ತವರು, ಠಾಣಾ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು. ಠಾಣಾ ಅಧಿಕಾರಿಗಳು ಮತ್ತು ಸಿಬಂದಿ ಭಾಗವಹಿಸಿದ್ದರು.

ಎಂಎನ್‌ಜಿ 2 ಜುಲೈ ಗೀತಾ ಕುಲಕರ್ಣಿ
ಜಪ್ಪಿನಮೊಗರಿನಲ್ಲಿರುವ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ‘ಅಪ್ರಾಪ್ತ ವಯಸ್ಸಿನ ವಾಹನ ಸವಾರರ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ’ದಲ್ಲಿ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಮಾತನಾಡಿದರು. ಪೊಲೀಸ್ ನಿರೀಕ್ಷಕ ರಮೇಶ್ ಎಚ್.ಹಾನಾಪುರ ಮೊದಲಾದವರಿದ್ದರು.