ನಂಜನಗೂಡು: ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ವಾಸವಿದ್ದ ಪೊಲೀಸ್ ಪೇದೆ ಸೋಮವಾರ ನೇಣಿಗೆ ಶರಣಾಗಿದ್ದಾರೆ.
ಬೀರೇಶ್ (37) ಮೃತರು. ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಬೀರೇಶ್ ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯಪೇದೆಯಾಗಿದ್ದರು. ಪ್ರಸ್ತುತ ಹುಲ್ಲಹಳ್ಳಿಯ 112 ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಸಂಬಂಧಿಕರ ಮನೆಗೆ ಬೀರೇಶ್ ಅವರ ಪತ್ನಿ ನಿರ್ಮಲಾ ಅವರು ಪುತ್ರಿಯೊಂದಿಗೆ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಪ್ರತಿದಿನ ಪತ್ನಿ ಬೀರೇಶ್‌ಗೆ ಕರೆ ಮಾಡಿ ಮಾತನಾಡುತ್ತಿದ್ದರು. ಆದರೆ ಸೋಮವಾರ ಬೆಳಗ್ಗೆ ಕರೆ ಸ್ವೀಕರಿಸದಿದ್ದಾಗ ಪತಿಯ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ತೆರಳಿ ನೋಡುವಂತೆ ತಿಳಿಸಿದರು. ಆತ ಬಂದು ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಬಳಿಕ ಪತ್ನಿ ಬೆಂಗಳೂರಿನಿಂದ ಮನೆಗೆ ಬಂದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪತ್ನಿ ನಿರ್ಮಲಾ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರವೀಂದ್ರ, ಪಿಎಸ್‌ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.