ಜಿಲ್ಲೆ

ಪೊಲೀಸ್ ಕಾನ್‌ಸ್ಟೇಬಲ್ ಅಮಾನತು

ಮರಿದೇವ ಹೂಗಾರ

ಹುಬ್ಬಳ್ಳಿ: ವೈಯಕ್ತಿಕ ದ್ವೇಷದಿಂದ ಢಾಬಾ ಮಾಲೀಕ ಮತ್ತು ವೇಟರ್ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಇಲ್ಲಿಯ ಬೆಂಡಿಗೇರಿ ಠಾಣೆಯ ಪೇದೆಯೊಬ್ಬರನ್ನು ಹು-ಧಾ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.

ಬೆಂಡಿಗೇರಿ ಠಾಣೆಯ ಕಾನ್‌ಸ್ಟೇಬಲ್, ಬಂಡಿವಾಡ ಗ್ರಾಮದ ವಿರೂಪಾಕ್ಷ ಅಳಗವಾಡಿ ಅಮಾನತಾದವರು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪೇದೆ ಅಳಗವಾಡಿ ತನ್ನ ಸ್ನೇಹಿತನೊಂದಿಗೆ ತಾಲೂಕಿನ ಬಂಡಿವಾಡ ಗ್ರಾಮ ಬಳಿಯ ಪ್ರೀತಿ ಢಾಬಾದ ಮಾಲೀಕ, ಗ್ರಾಪಂ ಮಾಜಿ ಅಧ್ಯಕ್ಷ ಹನಮಂತ್ ಹುಚ್ಚನವರ ಹಾಗೂ ವೇಟರ್‌ಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವೈಯಕ್ತಿಕ ದ್ವೇಷ ಹಿನ್ನೆಲೆ ಗಲಾಟೆ ಮಾಡಿಕೊಂಡ ಹಾಗೂ ಈ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೇದೆ ವಿರೂಪಾಕ್ಷ ಅಳಗವಾಡಿಯನ್ನು ಅಮಾನತು ಗೊಳಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಿಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.