ಬೆಳಗಾವಿ: ದಾಖಲೆಗಳಿಲ್ಲದೇ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 2.73 ಕೋಟಿ ರೂ. ಹಣವನ್ನು ಬೆಳಗಾವಿ ನಗರ ಅಪರಾಧ ವಿಭಾಗದ ಪೊಲೀಸರು ಶನಿವಾರ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿಯ ವಾಹನ ಚಾಲಕ ಸಚಿನ್ ಮೇಬಕುದಳಿ, ಕ್ಲೀನರ್ ಮಾರುತಿ ಮಾರಗುಡೆ ಬಂಧಿತರು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನದಲ್ಲಿ ಈ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಲಭ್ಯವಾಗಯಿತು. ಸಿಸಿಬಿ ಇನ್‌ಸ್ಪೆಕ್ಟರ್ ನಂದೀಶ್ವರ ಕುಂಬಾರ ಕರೆ ಮೇರೆಗೆ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದು ನಿಂತರು. ಗೂಡ್ಸ್ ವಾಹನದ ಕ್ಯಾಬಿನ್ ಭಾಗವನ್ನು ತುಸು ಮಾರ್ಪಾಡು ಮಾಡಿ, ಅದರಡಿ ಹಣ ಮುಚ್ಚಿಡಲಾಗಿತ್ತು. ವಾಹನದ ಒಳಭಾಗ ಪರಿವರ್ತನೆ ಮಾಡಿದ್ದರಿಂದ ಅನುಮಾನ ಬಂದು ತಪಾಸಣೆ ಮಾಡಿದ ಪೊಲೀಸರಿಗೆ 500 ರೂ. ಮುಖಬೆಲೆಯ ಕಂತೆಕಂತೆ ಹಣ ಸಿಕ್ಕಿತು. ವಾಹನವನ್ನು ಮಹಾರಾಷ್ಟ್ರದ ಸಾಂಗಲಿ ನಗರದಿಂದ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಬಂಧಿತರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ವಿಧಾನಸಭಾ ಚುನಾವಣೆ ನಡೆದ ಹಿನ್ನೆಲೆಯಲ್ಲಿ, ಅಕ್ರಮ ಹಣ ಸಾಗಣೆ ತಡೆಗೆ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.