ಜಿಲ್ಲೆ

ಪೊಲೀಸ್ ಫೋನ್ ಇನ್ ಖಾಸಗಿ ಬಸ್‌ಗಳದ್ದೇ ಸಮಸ್ಯೆಪೊಲೀಸರ ಜತೆ ಫೀಲ್ಡ್‌ಗಿಳಿದ ಬಸ್ ಮಾಲೀಕರು

ಹರೀಶ ಎಂ.


ಮಂಗಳೂರು: ಸಿಟಿ ಬಸ್‌ಗಳ ಫುಟ್‌ಬೋರ್ಡ್ ತಗ್ಗಿಸಿ, ಕಂಡಕ್ಟರ್‌ಗಳು ಅನಾವಶ್ಯಕ ಕಿರಿಕಿರಿಯಾಗುವಂತೆ ಸೀಟಿ ಊದುವುದಕ್ಕೆ ಕಡಿವಾಣ ಹಾಕಬೇಕು, ಬೇಗ ಹತ್ತಿ, ಬೇಗ ಇಳಿಯಿರಿ ಎಂದು ಜೋರು ಮಾಡದಂತೆ ಎಚ್ಚರಿಕೆ ನೀಡಬೇಕು, ಹಿರಿಯ ನಾಗರಿಕರಿಗೆ ಮೀಸಲಿಟ್ಟ ಸೀಟು ಬಿಟ್ಟು ಕೊಡುತ್ತಿಲ್ಲ, ನಿರ್ವಾಹಕರು ಗಮನ ಹರಿಸುತ್ತಿಲ್ಲ…


ಇದು ಶನಿವಾರ ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಖಾಸಗಿ ಬಸ್‌ಗಳ ವಿರುದ್ಧ ಕೇಳಿ ಬಂದ ದೂರುಗಳು. ಸಂಚಾರಿ ಪೊಲೀಸರ ಜತೆ ಶನಿವಾರದಿಂದ ಬಸ್ ಮಾಲೀಕರು ಫೀಲ್ಡ್‌ಗಿಳಿದು ಬಸ್ ಚಾಲಕ, ನಿರ್ವಾಹಕರ ಚಲನ ವಲನಗಳನ್ನು ಗಮನಿಸಲು ಆರಂಭಿಸಿದ್ದಾರೆ. ನಿಯಮಗಳನ್ನು ಪಾಲನೆ ಮಾಡುವ ಮೂಲಕ ಇನ್ನಾದರೂ ಒಂದಷ್ಟು ದೂರುಗಳು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಆಯುಕ್ತರು ಹೇಳಿದರು.


ಡ್ರಗ್ಸ್ ಮುಕ್ತ ಅಭಿಯಾನಕ್ಕೆ ಬೆಂಬಲ
ಸಿಗರೇಟ್ ಮಾರಾಟಕ್ಕೆ ದಂಡ ಯಾಕೆ?
ನಗರದಲ್ಲಿ ಡ್ರಗ್ಸ್ ಮುಕ್ತ ಅಭಿಯಾನದ ನಿಟ್ಟಿನಲ್ಲಿ ಪೊಲೀಸರು ಮಾಡುತ್ತಿರುವ ಕಾರ್ಯಾಚರಣೆ ಉತ್ತಮವಾಗಿದೆ. ನಮ್ಮದು ಸಣ್ಣ ಗೂಡಂಗಡಿ. ಅಲ್ಲಿ ಪೊಲೀಸರು ಸಿಗರೇಟ್ ಮಾರಾಟಕ್ಕೆ ಸಂಬಂಧಿಸಿ ಪದೇ ಪದೇ ದಾಳಿ ಮಾಡಿ ದಂಡ ಹಾಕುತ್ತಾರೆ. ಸಿಗರೇಟ್ ವಶಪಡಿಸಿಕೊಳ್ಳುತ್ತಿದ್ದಾರೆ. ಕಂಪನಿಯವರೇ ಸಿಗರೇಟ್ ಮಾರಾಟಕ್ಕೆ ಅವಕಾಶ ನೀಡಿದ್ದಾರೆ ಎಂದು ಉರ್ವಾ ಮತ್ತು ಆನೆಗುಂಡಿಯ ಇಬ್ಬರು ಸಣ್ಣ ವ್ಯಾಪಾರಿಗಳು ಅಹವಾಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ನಿಮಗೆ ತೊಂದರೆ ಮಾಡಬೇಕೆಂಬ ಇರಾದೆ ಪೊಲೀಸರಿಗಿಲ್ಲ. ಆದರೆ ಕಾನೂನು ಪ್ರಕಾರ ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಇಂತಹ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಜತೆಗೆ ಬಿಡಿಯಾಗಿ(ಲೂಸ್) ಆಗಿ ಸಿಗರೇಟ್ ಮಾಡಲು ಅವಕಾಶವಿಲ್ಲ. ಕಂಪನಿ ಮಾತು ಕೇಳಿ ಬಿಡಿಯಾಗಿ ಮಾರಾಟ ಮಾಡುವಂತಿಲ್ಲ ಎಂದು ಮೃದುವಾಗಿ ಎಚ್ಚರಿಸಿದರು.
ಅಕ್ರಮ ಫಂಡ್ ಊರೇ ಬಿಡುವಂತಾಗಿದೆ


ಮುಲ್ಕಿಯ ವ್ಯಕ್ತಿಯೊಬ್ಬರು ಕರೆ ಮಾಡಿ ನಾನು ಕಾನೂನುಬಾಹಿರ ಫಂಡ್ (ಚೀಟಿ ಹಣ) ಮಾಡುತ್ತಿದ್ದೇನೆ. ಕೆಲವರು ಹಣ ಸಮರ್ಪಕವಾಗಿ ನೀಡದ ಕಾರಣ ನಾನು ಇತರರಿಗೆ ಪಾವತಿಸಲು ಸಾಧ್ಯವಾಗದೆ ಇದೀಗ ನನಗೆ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ನಾನು ಊರು ಬಿಟ್ಟು ಹೋಗುವಂತಾಗಿದೆ. ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಎಂದು ಕೇಳಿದರು.


ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ನೀವು ಆ ರೀತಿ ಮಾಡಬೇಡಿ. ಕಚೇರಿಗೆ ಬಂದು ನಿಮ್ಮ ವ್ಯವಹಾರದ ಸಂಪೂರ್ಣ ಮಾಹಿತಿ ನೀಡಿ. ಯಾವ ರೀತಿಯಲ್ಲಿ ಕ್ರಮ ವಹಿಸಬಹುದು ನೋಡೋಣ ಎಂದರು. ಸೋಮವಾರ ಕಚೇರಿಗೆ ಬರುವುದಾಗಿ ಆ ವ್ಯಕ್ತಿ ಹೇಳಿದ್ದಾರೆ.


ಬಸ್ ಮಾಲೀಕರಿಂದಲೇ ಸುರಕ್ಷತೆಯ ಖಾತರಿ
ಬಸ್‌ನ ಫುಟ್‌ಬೋರ್ಡ್‌ನಿಂದ ಬಿದ್ದು ನಿರ್ವಾಹಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆಯ ಬಳಿಕ ಈಗಾಗಲೇ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಬಸ್ ಮಾಲೀಕರ ಜತೆ ಸಭೆ ನಡೆಸಲಾಗಿದೆ. ಹೊಸ ಬಸ್ಸುಗಳಿಗೆ ಡೋರ್ ಅಳವಡಿಕೆ ಕಡ್ಡಾಯ ಪಡಿಸಲಾಗಿದೆ. ಹಳೇ ಬಸ್ಸುಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ಯಾರೂ ಇಲ್ಲದಿರುವುದು ಖಾತರಿಪಡಿಸಿದ ಬಳಿಕವೇ ಚಾಲಕ ವಾಹನವನ್ನು ಚಲಾಯಿಸಬೇಕೆಂಬ ನಿಟ್ಟಿನಲ್ಲಿಯೂ ಸೂಚನೆ ನೀಡಲಾಗಿದೆ. ಅದಲ್ಲದೆ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸರ ಜತೆ ಬಸ್ ಮಾಲೀಕರನ್ನು ನಿಲ್ಲಿಸಿ ಬಸ್‌ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸುರಕ್ಷತೆಯನ್ನು ಪರಿಶೀಲಿಸುವ ಕ್ರಮ ವಹಿಸಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ತಿಳಿಸಿದರು.
ಡಿಸಿಪಿ ಅಂಶು ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಈ ಸಂದರ್ಭ ಉಪಸ್ಥಿತರಿದ್ದರು.