ಬೇಲೂರು: ಸಾರ್ವಜನಿಕರು ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಪೊಲೀಸ್ ಚೌಕಿಯಿಂದ ಅನುಕೂಲವಾಗಲಿದ್ದು, ಎಲ್ಲರೂ ಸಾರಿಗೆ ನಿಯಮಗಳನ್ನು ಪಾಲಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತ ಸಮೀಪ ನೂತನವಾಗಿ ನಿರ್ಮಿಸಿರುವ ಪೊಲೀಸ್ ಚೌಕಿಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಾಗ, ರಸ್ತೆ ದಾಟುವಾಗ ಹರಸಾಹಸ ಪಡಬೇಕಾಗುತ್ತದೆ. ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಪೊಲೀಸ್ ಇಲಾಖೆ ಅಧಿಕಾರಿಗಳು ನೂತನ ಪೊಲೀಸ್ ಚೌಕಿ ನಿರ್ಮಿಸಿದ್ದಾರೆ ಎಂದರು.
ಸಿಬ್ಬಂದಿ ಚೌಕಿಯಲ್ಲಿ ನಿಂತು ವಾಹನ ಸವಾರರನ್ನು ನಿಯಂತ್ರಿಸಿದರೆ ಯಾವುದೇ ಅಪಘಾತ ಸಂಭವಿಸುವುದಿಲ್ಲ. ಅಲ್ಲದೆ ಕೆಲ ವಾಹನ ಸವಾರರು ವೇಗವಾಗಿ ಚಾಲನೆ ಮಾಡಲಿದ್ದು, ಅಂತವರನ್ನು ಗುರುತಿಸಿ ತಿಳಿ ಹೇಳುವುದು ಅಥವಾ ದಂಡ ವಿಧಿಸುವ ಅವಕಾಶ ಸಿಗುತ್ತದೆ. ಸಾರ್ವಜನಿಕರೂ ಸಹ ಸುಗಮ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಡಿವೈಎಸ್‌ಪಿ ಲೋಕೇಶ್ ಮಾತನಾಡಿ, ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಿದರೆ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಅಲ್ಲದೆ ಸೂಕ್ತ ದಾಖಲೆ ಇಟ್ಟಿದ್ದರೆ ಒಳ್ಳೆಯದು. ಅನಾಹುತವಾದಾಗ ಪಶ್ಚಾತಾಪಪಡಬಾರದು. ವಾಹನಕ್ಕೆ ದಾಖಲೆಗಳು ಮುಖ್ಯ. ಜತೆಗೆ ಅಪ್ರಾಪ್ತರಿಗೆ ವಾಹನ ಕೊಡಬಾರದು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮನುಷ್ಯನ ಜೀವಕ್ಕೆ ಬೆಲೆ ಇದ್ದು, ವಾಹನ ಸವಾರರು ಟ್ರಾಫಿಕ್ ನಿಯಮವನ್ನು ಪಾಲಿಸಬೇಕು ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಪಿಎಸ್‌ಐ ಎಸ್.ಎಸ್.ಪಾಟೀಲ್, ಶೇಖರಪ್ಪ, ಮುಖಂಡರಾದ ಜಿ.ಕೆ.ಕುಮಾರ್.ಸಿ.ಎಸ್.ಪ್ರಕಾಶ್, ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.