ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಕೆ.ಆರ್​.ರಮೇಶ್​ಕುಮಾರ್​ ಹಲ್ಲೆಗೆ ಒಳಗಾದ ಪುರಸಭೆ ಸದಸ್ಯ ನಾಗೇಶ್​ ಆರೋಗ್ಯ ವಿಚಾರಿಸಿದರು. 
ಜಿಲ್ಲೆ

ಪೊಲೀಸರಿಂದ ಪುರಸಭೆ ಸದಸ್ಯನ ಮೇಲೆ ಹಲ್ಲೆ

ಕೋಲಾರ ಡೆಸ್ಕ್

ಶ್ರೀನಿವಾಸಪುರ : ತಾಲೂಕಿನ ನಂಬಿಹಳ್ಳಿಯಲ್ಲಿ ಜಾತ್ರೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಾಲಿಬಾಲ್​ ಪಂದ್ಯಾವಳಿಯಲ್ಲಿ ಉಂಟಾದ ಜಗಳ ಬಿಡಿಸಲು ತೆರಳಿದ ನನ್ನ ಮೇಲೆಯೇ ಪೊಲೀಸರು ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪುರಸಭೆ ಸದಸ್ಯ ನಾಗೇಶ್​ ಆರೋಪಿಸಿದ್ದಾರೆ.

ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್​ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಲಾಟೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಠಾಣೆ ಪೇದೆಗಳು ಹಲ್ಲೆ ಮಾಡಿ, ನಿಂದನೆ ಮಾಡಿದರು ಎಂದರು. ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ಕುಮಾರ್​ ಅವರು ನಾಗೇಶ್​ ಆರೋಗ್ಯ ವಿಚಾರಿಸಿ, ಘಟನೆಯ ಮಾಹಿತಿ ಪಡೆದು, ಹಲ್ಲೆ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವಾಲ್ಮೀಕಿ ಸಮುದಾಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್​ ಮಾತನಾಡಿ, ಪೊಲೀಸರ ನಡೆ ಅಮಾನವೀಯ, ಹಲ್ಲೆ ಮಾಡಿರುವ ಪೇದೆಗಳನ್ನು ತಕ್ಷಣ ವಜಾ ಮಾಡಿ, ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಕೋಲಾರ ಅಥವಾ ಶ್ರೀನಿವಾಸಪುರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಬೆಳಗ್ಗೆ ಗಲಾಟೆ, ಸಂಜೆ ಕೊಲೆ

ಕೋಲಾರ: ಸೋಮವಾರ ಬೆಳಗ್ಗೆ ಇಬ್ಬರ ನಡುವೆ ನಡೆದಿದ್ದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ ರಾತ್ರಿ ಕೊಲೆಯಾಗಿದೆ. ಈ ಬೆನ್ನಲ್ಲೇ ರೊಚ್ಚಿಗೆದ್ದ ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಕೊಲೆ ಮಾಡಿದ ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ. ತಾಲೂಕಿನ ಪುಲಗೂರಕೋಟೆ ಪಂಚಾಯಿತಿಯ ಗುಂತೋರಪಲ್ಲಿ ಗ್ರಾಮದ ಮಂಜುನಾಥ್​ ಮತ್ತು ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ ಮಧ್ಯೆ ಸೋಮವಾರ ಬೆಳಗ್ಗೆ ಸಣ್ಣ ಗಲಾಟೆ ನಡೆದಿತ್ತು. ಅದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಶ್ರೀಮೂರ್ತಿ ಸಂಜೆ ಸೋಮಯಾಜಲಹಳ್ಳಿಯಲ್ಲಿ ಎದುರಿಗೆ ಸಿಕ್ಕ ಮಂಜುನಾಥ್​ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಟನೆಯಿಂದ ರೊಚ್ಚಿಗೆದ್ದ ಮಂಜುನಾಥ್​ ಸಂಬಂಧಿಕರು ಆರೋಪಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸಲು ಬಂದ ಅಗ್ನಿ ಶಾಮಕ ದಳದವರನ್ನೂ ಗ್ರಾಮಕ್ಕೆ ಪ್ರವೇಶಿಸದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಒಪ್ಪಿಸುವವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಮಂಜುನಾಥ್​ ಕುಟುಂಬ ಪಟ್ಟು ಹಿಡಿದು, ಸೋಮಯಾಜಲಹಳ್ಳಿ ಬಸ್​ ನಿಲ್ದಾಣದಲ್ಲಿಯೇ ಶವವಿಟ್ಟು ಟಯರ್​ಗಳಿಗೆ ಬೆಂಕಿ ಹಚ್ಚಿ, ಪೊಲೀಸರನ್ನೂ ಗ್ರಾಮಕ್ಕೆ ಪ್ರವೇಶಿಸಲು ಬಿಡದಿರುವುದು ಉದ್ವಿಗ್ನತೆಗೆ ಕಾರಣವಾಗಿದೆ.