ಜಿಲ್ಲೆ

ಆನೇಕಲ್​ ಜನರನ್ನೆಬ್ಬಿಸಿತು ಮುಂಜಾನೆಯ ಗುಂಡಿನ ಸದ್ದು; ಹಂತಕರಿಬ್ಬರು ಪೊಲೀಸ್ ಬಲೆಗೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಗೃಹಿಣಿಯನ್ನು ಹತ್ಯೆ ಮಾಡಿ‌ ಚಿನ್ನಾಭರಣ ದೋಚಿದ್ದ ಹಂತಕರ ಕಾಲಿಗೆ ಗುಂಡು ಹಾರಿಸಿ ಹೆಬ್ಬಗೋಡಿ ಪೊಲೀಸರು‌ ಬಂಧಿಸಿದ್ದಾರೆ. ವೇಲು ಅಲಿಯಾಸ್ ಸೈಕೋ(23) ಮತ್ತು ಬಾಲಕೃಷ್ಣ ಅಲಿಯಾಸ್ ಬಾಲು(28) ಬಂಧಿತರು. ಸೆ.10ರಂದು ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಶ್ವೇತ ಎಂಬಾಕೆಯನ್ನು ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿದ್ದರು.

ಸೆ. 22ರ ಬೆಳಗಿನ ಜಾವ 5 ಗಂಟೆಗೆ ಆನೇಕಲ್ ಪಟ್ಟಣದಿಂದ ಮುತ್ಯಾಲಮಡುವುಗೆ ಹೋಗುವ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲು ತೆರಳಿದ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಗೌತಮ್ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಯ ಸಬ್ ಇನ್​ಸ್ಪೆಕ್ಟರ್ ಗೋವಿಂದ್ ಬಿ.ಟಿ ಹಾಗೂ ಸಿಬ್ಬಂದಿಗಳ ಮೇಲೆ ಆರೋಪಿಗಳು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದರು.

ಪೊಲೀಸರು ಸ್ವರಕ್ಷಣೆಗಾಗಿ ಆರೋಪಿಗಳಿಗೆ ಗುಂಡು ಹಾರಿಸಿ, ಬಳಿಕ ಬಂಧಿಸಲಾಗಿದೆ. ಆರೋಪಿಗಳ ಬಲಗಾಲಿಗೆ ಗುಂಡೇಟು ತಗುಲಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯ ಪಿ.ಸಿ ಶಿವಕುಮಾರ ರವರ ಎಡಗೈಗೆ ಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿತರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.