ಬೆಂಗಳೂರು: ಸರಗಳ್ಳತನದಲ್ಲಿ ತೊಡಗಿದ್ದ ಇಬ್ಬರು ಹಾಗೂ ಕದ್ದ ಚಿನ್ನಾಭರಣ ಖರೀದಿಸುತ್ತಿದ್ದ ಇನ್ನಿಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿ, ಆರೋಪಿಗಳಿಂದ 17.6 ಲಕ್ಷ ರೂ. ಮೌಲ್ಯದ 422 ಗ್ರಾಂ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿ ಕೊಂಡಿದ್ದಾರೆ.
ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ಮೊಹಮದ್ ರಫೀಕ್ (30), ಶಿವಮೊಗ್ಗದ ಇಮ್ರಾನ್ ಖಾನ್ (35) ಹಾಗೂ ಕದ್ದ ಚಿನ್ನಾಭರಣ ಖರೀದಿಸುತ್ತಿದ್ದ ಕೇರಳದ ಅನೀಸ್ (30) ಮತ್ತು ಶಫೀಕ್ (32) ಬಂಧಿತರು. ಆರೋಪಿಗಳ ವಿಚಾರಣೆಯಿಂದ ನಗರದ ವಿವಿಧೆಡೆ 9 ಸರಗಳವು ಪ್ರಕರಣಗಳು ಪತ್ತೆಯಾಗಿವೆ. ಸೈಯ್ಯದ್ ಎಂಬಾತ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಕೃತ್ಯ ಎಸಗಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪೆಟ್ ತಿಳಿಸಿದ್ದಾರೆ.
ಮದುವೆ ಸಮಾರಂಭ ಟಾರ್ಗೆಟ್!: ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳಗಳನ್ನು ಆರೋಪಿಗಳು ಗುರುತಿಸಿಕೊಂಡು, ಆ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ದೋಚುತ್ತಿದ್ದರು. ಫೆ.25ರಂದು ಬಸವನಗುಡಿ ಹಳೇ ಮಾರ್ಕೆಟ್ ರಸ್ತೆಯಲ್ಲಿ ಮದುವೆ ಮುಗಿಸಿ ನಡೆದುಹೋಗುತ್ತಿದ್ದ ರತ್ನಮ್ಮ (67) ಎಂಬುವರ ಸರ ಕಸಿದು ಪರಾರಿಯಾಗಿದ್ದರು. ಕಳ್ಳತನದ ದೃಶ್ಯ ಘಟನಾ ಸ್ಥಳದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಮೈಸೂರಿನಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿತ್ತು. ಪೊಲೀಸರು ಮೈಸೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.
ಪೊಲೀಸರ ವಶದಿಂದ ಪರಾರಿಯಾಗಿದ್ದ ಆರೋಪಿ!: ಆರೋಪಿ ರಫೀಕ್ ವಿರುದ್ಧ 25ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳಿವೆ. ಈಗಾಗಲೇ ಹಲವು ಬಾರಿ ಸರಗಳ್ಳತನ ಕೇಸ್ನಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ. ಜಾಮೀನಿನ ಮೇಲೆ ಹೊರಬಂದು ತನ್ನ ಹಳೇ ಚಾಳಿ ಮುಂದುವರಿಸಿದ್ದ. 2018ರಲ್ಲಿ ಮಲ್ಲೇಶ್ವರ ಪೊಲೀಸರು ಇಮ್ರಾನ್ನನ್ನು ಬಂಧಿಸಿದ್ದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಅಲ್ಲಿನ ಪೊಲೀಸರು ವಿಚಾರಣೆಗಾಗಿ ಬೆಂಗಳೂರಿನಿಂದ ಕರೆದೊಯ್ದಿದ್ದರು. ಆ ವೇಳೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪುತ್ತೂರು ಜೈಲಿಗೆ ಕರೆದೊಯ್ಯುವಾಗ ಇಬ್ಬರು ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ.