ಬೆಂಗಳೂರು: ಗುತ್ತಿಗೆದಾರನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಬಾಗಲೂರು ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ರವಿ ಅಲಿಯಾಸ್ ಕಮ್ರಾನ್ ರವಿ (26) ಬಂಧಿತ. ಆತನನ್ನು ಬಂಧಿಸಲು ಯತ್ನಿಸಿದ ಪೇದೆ ರವಿ ದಳವಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಇನ್ಸ್ಪೆಕ್ಟರ್ ರಾಮಮೂರ್ತಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ರವಿ ಹಾಗೂ ಹಲ್ಲೆಗೊಳಗಾದ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆ ವೇಳೆ ಕಮ್ರಾನ್ ರವಿ ಸಹಚರ ಮಣಿಕಂಠ (21) ಮತ್ತು ಮಹೇಂದ್ರ (22)ನನ್ನೂ ಬಂಧಿಸಲಾಗಿದೆ ಎಂದು ಈಶಾನ್ಯ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಮಂಗಳವಾರ (ಮಾ.10) ಗುತ್ತಿಗೆದಾರ ಉಮಾಶಂಕರ್ ನನ್ನು (25) ಕೊಲೆ ಮಾಡಿ ತಲೆಮರೆಸಿಕೊಂಡು ತಿರುಗುತ್ತಿದ್ದ. ಗುರುವಾರ (ಮಾ.12) ರಾತ್ರಿ ಕೋಗಿಲು ಕ್ರಾಸ್ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಾಗಲೂರು ಠಾಣೆ ಇನ್ಸ್ಪೆಕ್ಟರ್ ರಾಮಮೂರ್ತಿ ಸಿಬ್ಬಂದಿ ಜತೆ ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ನಸುಕಿನ ಜಾವ 5.30 ಗಂಟೆಯಲ್ಲಿ ಕಮ್ರಾನ್ ಮತ್ತು ಆತನ ಸಹಚರ ರಾಜೇಶ್ ಕೋಗಿಲು ಕ್ರಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಂಧಿಸಲು ಹೋದ ಪೇದೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಕೂಡಲೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ರಾಮಮೂರ್ತಿ ಗಾಳಿಯಲ್ಲಿ 1 ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಅದನ್ನು ಲೆಕ್ಕಿಸದೆ ಮತ್ತೇ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಿವಾಸಪುರದ ನಿವಾಸಿ ಉಮಾ ಶಂಕರ್ ಗುತ್ತಿಗೆ ದಾರನಾಗಿ ಕೆಲಸ ಮಾಡಿಕೊಂಡಿದ್ದ. ಸ್ಥಳೀಯವಾಗಿ ಹಿಡಿತ ಸಾಧಿಸಲು ರವಿ ಗ್ಯಾಂಗ್ ಜತೆ ಗಲಾಟೆಯಾಗಿತ್ತು. ಅಲ್ಲದೆ, ಕೆಲ ತಿಂಗಳ ಹಿಂದೆ ಯಲಹಂಕದಲ್ಲಿ ಭರತ ಎಂಬಾತ ಹತ್ಯೆಯಾಗಿತ್ತು. ಕೊಲೆ ಆರೋಪಿಗಳ ಜತೆ ಉಮಾಶಂಕರ್ ಗುರುತಿಸಿಕೊಂಡಿದ್ದ. ಇದೇ ವಿಚಾರಕ್ಕೆ ದ್ವೇಷ ಇಟ್ಟುಕೊಂಡಿದ್ದ ಕಮ್ರಾನ್ ರವಿ ತನ್ನ ಸಹಚರರ ಜತೆಗೂಡಿ ಉಮಾಶಂಕರ್ ಹತ್ಯೆಗೆ ಸಂಚು ರೂಪಿಸಿದ್ದ. ಈ ವಿಚಾರ ಉಮಾಶಂಕರ್ಗೆ ಗೊತ್ತಾಗಿದ್ದು,
ರವಿ ಜತೆ ಮಾತನಾಡಿ ರಾಜೀ ಮಾಡಿಕೊಳ್ಳುವುದಾಗಿ ತನ್ನ ಪತ್ನಿ ಮುಂದೆ ಹೇಳಿದ್ದ. ಮಾ.10ರ ಬೆಳಗ್ಗೆ 11 ಗಂಟೆಗೆ ತನ್ನ ಸ್ನೇಹಿತ ಭರತ್ ಜತೆ ಬೈಕ್ನಲ್ಲಿ ಕಚೇರಿಗೆ ತೆರಳುತ್ತಿದ್ದಾಗ ರವಿ ತನ್ನ ಸಹಚರರ ಜತೆ ಕಾರಿನಲ್ಲಿ ಹಿಂಬಾಲಿಸಿ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಕೆಳಗೆ ಬಿದ್ದಿದ್ದ ಉಮಾಶಂಕರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆ ತಡೆಯಲು ಮುಂದಾದ ಭರತ್ ಮೇಲೆಯೂ ಮಚ್ಚು ಬೀಸಿ ಪರಾರಿಯಾಗಿದ್ದರು. ಉಮಾಶಂಕರ್ ಗಂಭೀರವಾಗಿ ಗಾಯಗೊಂಡಿದ್ದು, ಭರತ್ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಉಮಾಶಂಕರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ.