ಜಿಲ್ಲೆ

ಮದ್ವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ಆ ವಿಷ್ಯ!; ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ 52 ವರ್ಷದ ವರ..

ಉತ್ತರಕನ್ನಡ: ರಾಜಧಾನಿ ಬೆಂಗಳೂರಿನಲ್ಲಿ 14 ವರ್ಷದ ಬಾಲಕಿಯನ್ನು 45 ವರ್ಷದ ವಿವಾಹಿತ ವ್ಯಕ್ತಿ ಮದುವೆಯಾಗಿ, ಮೂರೇ ದಿನದಲ್ಲಿ ವಿಷಯ ಬಹಿರಂಗವಾಗಿ ಬಂಧನಕ್ಕೆ ಒಳಗಾಗಿದ್ದಾನೆ. ಅದರ ಬೆನ್ನಿಗೇ ಇದೀಗ 52ರ ವಯಸ್ಸಿನವನೊಬ್ಬ ಮದುವೆಯ ವಿಚಾರಕ್ಕೆ ಸಂಬಂಧಿಸಿ ಎಡವಟ್ಟು ಮಾಡಿಕೊಂಡು ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೂ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಪ್ರಕರಣ ನಡೆದಿದೆ. 52 ವರ್ಷದ ಅನಿಲ್​ ಎಂಬ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಮದುವೆಯಾಗಿದ್ದಾನೆ. ವಧು-ವರರಿಬ್ಬರೂ ಕಾರವಾರದ ನಿವಾಸಿಗಳಾಗಿದ್ದು, ಮದುವೆಯಾದ ಮೂರು ತಿಂಗಳ ಬಳಿಕ ವಧು ಅಪ್ರಾಪ್ತ ವಯಸ್ಸಿನವಳು ಎಂಬ ವಿಷಯ ಬಹಿರಂಗಗೊಂಡಿದೆ.

ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅನಿಲ್​ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಬಂಧನದ ಭೀತಿಯಿಂದ ಅನಿಲ್​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ. ಮದುವೆಗೆ ಹೋದ ಸಂಬಂಧಿಕರು ಸೇರಿ ಒಟ್ಟು 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್​ ನೀಡಿದ್ದು, ವರ ಅನಿಲ್​ನನ್ನು ಬಂಧಿಸಲಾಗಿದೆ. ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.