ಜಿಲ್ಲೆ

ಐವರು ಕಳ್ಳರ ಬಂಧನ,4 ಲಕ್ಷ ರೂ. ಮೌಲ್ಯದ ಸ್ವತ್ತು ವಶ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ವಿವಿಧೆಡೆ ಸರಗಳ್ಳತನ, ಮನೆಗಳ್ಳತನದಲ್ಲಿ ತೊಡಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆ ಕಳ್ಳತನ ಮತ್ತು ಸರಗಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಘಟನೆಯ ಜಾಡು ಹಿಡಿದ ಹಳೇಹುಬ್ಬಳ್ಳಿ ಇನ್ಸಪೆಕ್ಟರ್ ಎಸ್.ಎಚ್. ಯಳ್ಳೂರ ಅವರ ನೇತೃತ್ವದ ತಂಡವು ಪ್ರಕರಣ ಭೇದಿಸಿದೆ.
ಬಂಧಿತ ಆರೋಪಿಗಳಿಂದ 4.02 ಲಕ್ಷ ಮೌಲ್ಯದ 78 ಗ್ರಾಂ ಚಿನ್ನಾಭರಣ, 65 ಗ್ರಾಂ ಬೆಳ್ಳಿಯ ಒಡವೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ನಾಗರಾಜ ಬಾಚಣಕಿ, ಸಾಗರ ದುಂಡಿ, ಗಣೇಶ ಕಟ್ಟಿಮನಿ ಮನೆಗಳ್ಳತನ ಆರೋಪಿಗಳು, ಸರಗಳ್ಳತನ ಆರೋಪಿತರಾದ ಗಣೇಶ ಪಾಂಚಾಣ, ಪ್ರವಿಣ ಹಂಚಿನಮನಿ ಎಂಬುವವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಹಳೇಹುಬ್ಬಳ್ಳಿ ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.