ಉಡುಪಿ: ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿಯನ್ನೇ ಬೆಂಕಿ ಹಾಕಿ ಸುಟ್ಟು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪುತ್ರನನ್ನು ಉಡುಪಿ ಜಿಲ್ಲೆಯ ಬೈಂದೂರು ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆ ಮಂಜೇಶ್ವರದ ನಲ್ಲಂಗಿಪಾದವು ಗ್ರಾಮದ ಮೆಲ್ವಿನ್ ಲೂವಿಸ್ ಮಾಂಟೆರೋ (38) ಬಂಧಿತ ಆರೋಪಿ.
ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೊಡು ಬ್ಯಾತಿಯಾನಿ ಎಂಬಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ಆತನನ್ನು ಮಂಜೇಶ್ವರ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬೈಂದೂರು ಠಾಣೆಯ ಪಿಎಸ್ಐ ತಿಮ್ಮೇಶ ಬಿ.ಎನ್. ಕೊಲ್ಲೂರು ಠಾಣೆಯ ಪಿಎಸ್ಐ ವಿನಯ ಕೆ., ಠಾಣೆಗಳ ಸಿಬ್ಬಂದಿಯಾದ ನಾಗೇಂದ್ರ, ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ, ಚಿದಾನಂದ ಪಾಲ್ಗೊಂಡಿದ್ದರು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.