ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಕುಂದುಕೊರತೆ ಸಭೆ ನಡೆಯಿತು. ಇನ್‌ಸ್ಪೆಕ್ಟರ್ ರೇವತಿ, ಎಸ್.ಕೆ. ಬಾಲಕೃಷ್ಣ, ಕೆ.ಜಿ. ಪುಟ್ಟರಾಜು, ಕೇಶವಪ್ರಸಾದ್, ಶಿವಲಿಂಗಪ್ಪ, ಸುನಿಲ್, ಕುಮಾರ್, ವಿನೋದ್, ಆಟೋ ಚಾಲಕರು ಹಾಜರಿದ್ದರು. 
ಜಿಲ್ಲೆ

ಆಟೋ ಚಾಲಕರು ಪೊಲೀಸರೊಂದಿಗೆ ಸಹಕರಿಸಿ

ಕಿಕ್ಕೇರಿ: ಆಟೋ ಚಾಲಕರ ಸೇವೆ ಅನುಪಮವಾಗಿದ್ದು, ಇಲಾಖೆಯೊಂದಿಗೆ ಸಹಕರಿಸುವಂತೆ ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಆಟೋ ಚಾಲಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಗಾಡು ಎನ್ನದೆ ಎಲ್ಲ ಪ್ರದೇಶದ ಜನರಿಗೆ ಅವಶ್ಯವಾಗಿ ಬೇಕಿರುವವರು ಆಟೋ ಚಾಲಕರ ಸೇವೆ. ಹೀಗಾಗಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ತಮ್ಮ ಕರ್ತವ್ಯ ಎಂದರು.

ಚಾಲಕರು ತಮ್ಮ ಆಟೋಗಳ ವಿಮೆ, ಎಫ್‌ಸಿಯಂತಹ ಸೂಕ್ತ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಬೇಡಿ. ಯಾವುದೇ ರೀತಿ ಸಮಸ್ಯೆ, ಅಪಘಾತ ಸಂಭವಿಸಿದ್ದಲ್ಲಿ ವಿಮೆ ಮಾಡಿಸಿಕೊಳ್ಳುವುದರಿಂದ ತಮ್ಮ ಸಮಸ್ಯೆಗೆ ಅಲ್ಪಸ್ವಲ್ಪ ಪರಿಹಾರ ಸಿಗಲಿದೆ. ನಿಗದಿತ ಸೀಟಿಗಿಂತ ಹೆಚ್ಚು ಸೀಟು ಹಾಕಿಕೊಂಡು ವಾಹನ ಚಲಾಯಿಸಿದಿರಿ. ರಾತ್ರಿ ವೇಳೆ ಪ್ರಯಾಣಿಕರ ಮಾಹಿತಿ ಇಲ್ಲದೆ ಪ್ರಯಾಣ ಬೇಡ. ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಮಾಹಿತಿ ನೀಡಿ. ಹೆಚ್ಚು ಬಾಡಿಗೆ ಸಿಗಲಿದೆ ಎಂದು ಅಪರಿಚಿತ ವ್ಯಕ್ತಿ, ಸಾಮಾನು ಸಾಗಿಸಬೇಡಿ. ಮದ್ಯಪಾನ, ಸಮವಸ್ತ್ರವಿಲ್ಲದೆ ಚಾಲನೆ ಬೇಡ ಎಂದು ಸಲಹೆ ನೀಡಿದರು.

ರಾತ್ರಿ ವೇಳೆ ದುಪ್ಪಟ್ಟು ಹಣ ಕೇಳುವ ಮಾಹಿತಿ ಇದೆ. ಆಟೋ ಸ್ಟ್ಯಾಂಡ್ ವ್ಯವಸ್ಥೆಯಾಗಿದ್ದರೂ ಜನನಿಬಿಡ ಪ್ರದೇಶದಲ್ಲಿ ನಿಲುಗಡೆ ಮಾಡುವುದರಿಂದ ನಾಗರಿಕರ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಆಟೋಗಳಲ್ಲಿ ಕರ್ಕಶವಾದ ಹಾರನ್, ಜೋರಾಗಿ ಹಾಡು ಕೇಳುವುದು, ಗುಂಪುಗೂಡಿಕೊಂಡು ಜೋರಾಗಿ ಮಾತನಾಡುವ ದೂರುಗಳು ಕಂಡು ಬರುತ್ತಿದೆ. ಎಲ್ಲವನ್ನು ಒಂದು ವಾರದೊಳಗೆ ಸರಿಪಡಿಸಿಕೊಳ್ಳಿ. ಕಾನೂನು ಗೌರವಿಸಿದರೆ ತಮ್ಮ ರಕ್ಷಣೆಗೆ ತಾವು ಇರುವುದಾಗಿ ಹೇಳಿದರು.

ಗ್ರಾಪಂ ಅಧ್ಯಕ್ಷ ಎಸ್.ಕೆ.ಬಾಲಕೃಷ್ಣ, ಕೆ.ಜಿ. ಪುಟ್ಟರಾಜು, ರಾಜೇಶ್, ಪಿಎಸ್‌ಐ ಕೇಶವಪ್ರಸಾದ್, ಶಿವಲಿಂಗಪ್ಪ, ಸುನಿಲ್, ಕುಮಾರ್, ವಿನೋದ್, ಆಟೋ ಚಾಲಕರು ಹಾಜರಿದ್ದರು.