ಜಿಲ್ಲೆ

ಪೊಲೀಸರಿಂದ ಸುಸ್ಥಿರ ಸಮಾಜ; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ಸಲಹೆ

Tumakuru

ತುಮಕೂರು : ಸಮಾಜ ಸುಸ್ಥಿರವಾಗಿರಲು ಪೊಲೀಸರ ಪಾತ್ರ ಮಹತ್ವದ್ದಾಗಿದೆ, ಎಲ್ಲರೂ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಪುತ್ಥಳಿಗೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದರು. ಪೊಲೀಸರು ದೈಹಿಕ, ಮಾನಸಿಕ, ಸಾಮಾಜಿಕ, ರಾಜಕೀಯ ಒತ್ತಡಗಳ ನಡುವೆಯೂ ಸಮಾಜದಲ್ಲಿ ಶಾಂತಿ ನೆಲೆಸಲು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಾರೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ, ಪೊಲೀಸ್ ಶಿಸ್ತಿನ ಇಲಾಖೆಯಾಗಿದ್ದು, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ ಪರಸ್ಪರವಾಗಿ ಕೆಲಸ ಮಾಡುತ್ತಿದೆ. ಎರಡೂ ಗುರುತರ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತವೆ ಎಂದರು.

ಸಮಾಜಘಾತುಕ ಶಕ್ತಿ ತೊಡೆದು ಹಾಕುವ ಜತೆಗೆ ಪೊಲೀಸರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಪಘಾತ ಸೇರಿ ಇನ್ನಿತರ ಘಟನೆಗಳಲ್ಲಿ ಪೊಲೀಸರು ಮಾನವೀಯ ಮೌಲ್ಯ ತೋರಿ ಜನರ ಪ್ರಾಣ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಚೀನಾ-ಭಾರತ ಗಡಿ ಭಾಗದಲ್ಲಿ 1959ರಲ್ಲಿ ನಡೆದ ಯುದ್ಧದ ದಾಳಿಯಲ್ಲಿ 10 ಪೊಲೀಸರು ವೀರ ಮರಣ ಹೊಂದಿದು, ಅವರ ನೆನಪಿಗಾಗಿ ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಕರ್ಮಿಗಳ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸರ ಸವಿನೆನಪಿಗಾಗಿ ಹುತಾತ್ಮರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಪೊಲೀಸರ ಹುತಾತ್ಮರ ದಿನಾಚರಣೆ ಎಲ್ಲರಿಗೂ ಪ್ರೇರಣೆಯಾಗಬೇಕೆಂಬ ದೃಷ್ಟಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರಿಗೂ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅರಿವು ಮತ್ತು ಪೊಲೀಸರ ಕರ್ತವ್ಯ ನಿಷ್ಠೆಯನ್ನು ತಿಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಮಾತನಾಡಿ, ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣ ಸಮರ್ಪಿಸಿದ ಪೊಲೀಸರಿಗೂ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು. ಐಪಿಎಸ್ ಅಧಿಕಾರಿ(ಪ್ರೊಬೆಷನರಿ) ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಸೇರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.