ಮಡಿಕೇರಿ:
ಸಾರ್ವಜನಿಕರ ಸಮಸ್ಯೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಭಾನುವಾರ ಗೋಣಿಕೊಪ್ಪಲು ಪಟ್ಟಣದಲ್ಲಿ ಚಾಲನೆ ನೀಡಲಾಯಿತು. ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಬಿ.ಕೆ. ಪ್ರದೀಪ್ ಕುಮಾರ್
ಮತ್ತು ಸಿಬ್ಬಂದಿ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದ ಉಮಾಮಹೇಶ್ವರಿ ಬಡಾವಣಿಗೆ ತೆರಳಿ ಮನೆಬಾಗಿಲಿಗೆ ಪೊಲೀಸರು ಎನ್ನುವ ಪೊಲೀಸರ ಜನಸ್ನೇಹಿ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಮನೆ ಮನೆಗೆ ಪೊಲೀಸ್ ಎಂಬುದು ರಾಜ್ಯ ಸರ್ಕಾರದ ವಿನೂತನ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ಪೊಲೀಸರಿಂದ ಹೆಚ್ಚಿನ ಸೇವೆ ಈ ಮೂಲಕ ಜನರೆಡೆಗೆ ತಲುಪಲಿದೆ ಎಂದು ಬಿ.ಕೆ. ಪ್ರದೀಪ್ ಕುಮಾರ್ ಹೇಳಿದರು.
ನಂತರ ಕಾರ್ಯಕ್ರಮದ ಭಾಗವಾಗಿ ಪೊಲೀಸ್ ಸಿಬ್ಬಂದಿ ಎಂಟು ವಾರ್ಡ್ಗಳಲ್ಲಿ ಅಭಿಯಾನ ಕೈಗೊಂಡು, ಸೈಬರ್ ಅಪರಾಧ, ಮಾದಕ ವಸ್ತು, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.
ಮನೆಯಲ್ಲಿರುವವರ ಹೆಸರು, ಮೊಬೈಲ್ ನಂಬರ್ ಪಡೆದುಕೊಳ್ಳಲಾಯಿತು.
ಗೋಣಿಕೊಪ್ಪಲು ಪ್ರೊಬೆಷನರಿ ಪಿಎಎಸ್‌ಐ ಕಾಳಿಂಗಪ್ಪ, ಎಎಎಸ್‌ಐಗಳಾದ ಶ್ರೀನಿವಾಸ್, ವೆಂಕಟೇಶ್,
ಹಾಗೂ ಪೊಲೀಸ್ ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.