ಧನಂಜಯ ಗುರುಪುರ
ಶಿಥಿಲಗೊಂಡಿದೆ ಎಂದು ಕಳೆದ ವರ್ಷ ಆಗಸ್ಟ್ ತಿಂಗಳಿಂದ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದ್ದ ಅಡ್ಡೂರು- ಪೊಳಲಿ ಸೇತುವೆಯಲ್ಲಿ ನಾಲ್ಕೈದು ದಿನಗಳಿಂದ ಎಲ್ಲ ಬಗೆಯ ಭಾರಿ ವಾಹನಗಳು ಓಡಾಡುತ್ತಿವೆ.
ಪೊಳಲಿ ದೇವಸ್ಥಾನದಲ್ಲಿ ಮಾ.5 ಮತ್ತು 6ರಂದು ನಡೆದಿದ್ದ ಪೂಜಾ ಕಾರ್ಯ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು, ವಾಹನ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಸೇತುವೆಯಲ್ಲೇ ಕೆಲವು ಖಾಸಗಿ ಮಿನಿ ಬಸ್‌ಗಳು ಸಂಚರಿಸಿದ್ದರೆ, ಉಳಿದ ಬಸ್‌ಗಳು ಸೇತುವೆಯ ಎರಡೂ ಪಾರ್ಶ್ವದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದವು. ಅಚ್ಚರಿಯೆಂದರೆ, ಮಾ.8ರಿಂದ ಭಾರಿ ವಾಹನಗಳ ಸಹಿತ ಪ್ರಯಾಣಿಕರ ಎಲ್ಲ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಈ ಸೇತುವೆಯಲ್ಲೇ ಸಂಚರಿಸುತ್ತಿವೆ. ಈ ಧಿಡೀರ್ ಬೆಳವಣಿಗೆ ಹಿಂದಿರುವ ಕಾರಣ ಇನ್ನೂ ನಿಗೂಢವಾಗಿದೆ.
ಹೊಸ ಸೇತುವೆಗೆ ಬೇಡಿಕೆ: ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ ಹೊಸ ಸೇತುವೆ ನಿರ್ಮಿಸಲು ಸಾರ್ವಜನಿಕರಿಂದ ಬೇಡಿಕೆ ಇತ್ತಾದರೂ, ಸರ್ಕಾರವು ಪೊಳಲಿಯಲ್ಲಿ 6 ಕೋಟಿ ರೂ.ವೆಚ್ಚದಲ್ಲಿ ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಿಸಿ, ನಿಯಮಾನುಸಾರವಾಗಿ ನಿರ್ದಿಷ್ಟ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡುವ ಹಾಗೂ 4. 95 ಕೋಟಿ ರೂ.ವೆಚ್ಚದಲ್ಲಿ ಉಳಾಯಿಬೆಟ್ಟಿನಲ್ಲಿ ಹೊಸ ಕಿರು ಸೇತುವೆ ನಿರ್ಮಿಸಲು ಪ್ರಸ್ತಾವಿಸಿತ್ತು. ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ ಎಂದು ಸೇತುವೆ ವೀಕ್ಷಿಸಲು ಆಗಮಿಸಿದ್ದ ಸಚಿವರು, ಪಿಡಬ್ಲುೃಡಿ ಹಿರಿಯ ಅಧಿಕಾರಿಗಳು ಹೇಳಿದ್ದರು. ಆದರೆ ಕಾಮಗಾರಿ ಆರಂಭಕ್ಕು ಮುನ್ನವೇ ಇಲ್ಲಿ ವಾಹನಗಳು ಸಂಚರಿಸುತ್ತಿವೆ.
ಭಾರಿ ವಾಹನ ಸಂಚಾರ: ಪೊಳಲಿಯಲ್ಲಿ ಸೇತುವೆ ದುರಸ್ತಿಯಾಗದೆ ಭಾರಿ ವಾಹನ ಸಂಚಾರ ಆರಂಭಗೊಂಡಿದ್ದರೆ, ಉಳಾಯಿಬೆಟ್ಟಿನಲ್ಲಿ ಕಿರು ಸೇತುವೆ ಬಳಿ ನಿರ್ಮಿಸಲಾದ ಮಣ್ಣಿನ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳ ಸಹಿತ ಎಲ್ಲ ವಾಹನಗಳು ಸಂಚರಿಸುತ್ತಿವೆ. ಉಳಾಯಿಬೆಟ್ಟಿನಲ್ಲಿ ಮಣ್ಣಿನ ರಸ್ತೆ ನಿರ್ಮಿಸಿದ ಮರುದಿನವೇ ಉಕ್ಕಿನ ಕಮಾನು ತುಂಡರಿಸಲಾಗಿದೆ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳ ಮೌನ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಸೇತುವೆಯ ಕಂಬಗಳ ಬುಡಕ್ಕೆ ಸಾಕಷ್ಟು ಕಲ್ಲುಬಂಡೆ ಹಾಸಲಾಗಿದೆ. ಬೇರಿಂಗ್ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ನಡೆದಿರುವ ಕಾಮಗಾರಿ ಮೊತ್ತ ಗುತ್ತಿಗೆ ಕಂಪನಿಗೆ ಪಾವತಿಯಾಗಲಿದೆ. ಪೊಳಲಿ-ಅಡ್ಡೂರು ಸೇತುವೆ ಹೋರಾಟ ಸಮಿತಿ ಹೊಸ ಸೇತುವೆಗಾಗಿ ಹೋರಾಟ ಮುಂದುವರಿಸಲಿದೆ. ಚಂದ್ರಹಾಸ ಪಲ್ಲಿಪಾಡಿ ಕರಿಯಂಗಳ ಗ್ರಾಪಂ ಸದಸ್ಯ
ದುರಸ್ತಿಯಾಗದೆ ಧಾರಣಾ ಶಕ್ತಿ ಹೆಚ್ಚಿತೇ ?
ಪೊಳಲಿ ಸೇತುವೆಯಲ್ಲಿ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಹಳೇ ಸೇತುವೆ ಕೆಲವು ಗರ್ಡರ್ ಎತ್ತಿ ಕಂಬಗಳಡಿಗೆ ಹೊಸ ಬೇರಿಂಗ್ ಅಳವಡಿಸಲಾಗುವುದು. ಇದಕ್ಕೆ 15-20 ದಿನ ಕಾಲಾವಕಾಶ ಬೇಕಿದೆ ಎಂದು ಪಿಡಬ್ಲುೃಡಿ ಹಿರಿಯ ಅಧಿಕಾರಿಗಳು ಹೇಳಿದ್ದರು. ಒಂದು ತಿಂಗಳಿಂದ ದುರಸ್ತಿಗೆ ಮುಂಚಿತವಾಗಿ ನದಿ ಕೆಳಗಡೆ ನೀರಿಗೆ ಮಣ್ಣು-ಬಂಡೆ ಕಲ್ಲು ಹಾಸಿ ಬಂಡು ರಸ್ತೆ ನಿರ್ಮಿಸಲಾಗಿದ್ದು, ಬೇರಿಂಗ್ ಅಳವಡಿಸುವ ಕಾಮಗಾರಿ ನಡೆಯಬೇಕಿತ್ತು. ಅಚ್ಚರಿ ಸಂಗತಿಯೆಂದರೆ, ಮೂಲವೊಂದರ ಪ್ರಕಾರ ಸೇತುವೆಯಲ್ಲಿ 6 ಕೋ.ರೂ.ಕಾಮಗಾರಿ ನಡೆಯುವುದಿಲ್ಲ. ಸೇತುವೆ ಕಂಬಗಳ ಸುತ್ತ ಈಗ ಕಲ್ಲು ಹಾಸಿ ಭದ್ರಪಡಿಸಲಾಗಿದೆ. ಈವರೆಗಿನ ಕಾಮಗಾರಿ ಮೊತ್ತ ಕಾವೂರಿನ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿಗೆ ಸಂದಾಯವಾಗಲಿದೆ. ಹಾಗಿದ್ದರೆ ಇಷ್ಟಕ್ಕೆ ಹಳೇ ಸೇತುವೆ ಧಾರಣಾ ಸಾಮರ್ಥ್ಯ ಹೆಚ್ಚಿತೇ ? ಸೇತುವೆ ಶಿಥಿಲಗೊಂಡಿರುವುದು ಸುಳ್ಳೇ ?ಐದಾರು ತಿಂಗಳಿಂದ ಸಾರ್ವಜನಿಕರು ಅನುಭವಿಸಿದ ತೊಂದರೆಗಳಿಗೆ ಜಿಲ್ಲಾಡಳಿತದ ಉತ್ತರವೇನು ? ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.