ಜಿಲ್ಲೆ

ಪೋಕ್ಸೋ ಕಾಯ್ದೆ ಅರಿವು ಮೂಡಿಸುವ ಕೆಲಸವಾಗಲಿ

ಬೆಟ್ಟದಪುರ: ಮಕ್ಕಳಿಗೆ ರಕ್ಷಣೆ, ಭದ್ರತೆ ಹಾಗೂ ನ್ಯಾಯ ಒದಗಿಸುವುದರ ಜತೆಗೆ ಅವರ ಹಿತ ಕಾಪಾಡುವ ಉದ್ದೇಶದಿಂದ ಪೋಕ್ಸೋ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ನಿವೃತ್ತ ಪಿಎಸ್‌ಐ ಡಿ.ಆರ್. ಜಯಸ್ವಾಮಿ ಆರಾಧ್ಯ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರಗಳಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಇವುಗಳ ಬಗ್ಗೆ ವಿದ್ಯಾರ್ಥಿನಿಯರು ಹೆಚ್ಚು ಅರಿವು ಪಡೆದುಕೊಳ್ಳುವುದು ಅಗತ್ಯವಾಗಿದೆ. ಪೋಕ್ಸೋ ಕಾಯ್ದೆ ಅಂಶಗಳ ಬಗ್ಗೆ ಶಾಲಾ ಪ್ರಾರ್ಥನೆ ಮಾಡುವ ಸಮಯದಲ್ಲಿ, ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಮಯದಲ್ಲಿ, ಪಾಲಕರ ಸಭೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಸಾರ್ವಜನಿಕರ ಸ್ಥಳದಲ್ಲಿ ಹಾಗೂ ಬಸ್‌ನಲ್ಲಿ ಸಂಚಾರ ಮಾಡುವಾಗ ಸ್ಥಳಗಳಲ್ಲಿ ದೌರ್ಜನ್ಯ ಕಂಡರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಮಕ್ಕಳ ಸಹಾಯವಾಣಿ 112ಗೆ ಕರೆ ಮಾಡಿ ತಿಳಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸರಿಉತ್ತರ ನೀಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಉಪಪ್ರಾಂಶುಪಾಲ ಮಂಜೇಗೌಡ, ಶಿಕ್ಷಕ ಗೊರಳ್ಳಿ ಜಗದೀಶ್, ನಿಂಗರಾಜು, ಕೆಂಪರಾಜು, ಜ್ಯೋತಿ, ಮಮತಾ ನಾಯಕ್ ಇತರರು ಇದ್ದರು.