| ಸತೀಶ್ ಕಂದಗಲ್ಪುರ ಬೆಂಗಳೂರು
ನಗರದಲ್ಲಿ ವಾಸವಿರುವ ವಿಷಕಾರಿ ಹಾವು ಮರಿಗಳು ಮೇ 15 ರಿಂದ ಆ.15ರವರೆಗೆ ( ಮೂರು ತಿಂಗಳು) ಮೊಟ್ಟೆಯಿಂದ ಹೊರಬರುವ ಅವಧಿಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ, ರಸ್ತೆಗಳಲ್ಲಿ ಹಾವಿನ ಮರಿಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳು, ವಾಹನ ಸವಾರರು ಹಾಗೂ ಪಾದಚಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.
ಬೆಂಗಳೂರಿನ ಹವಾಮಾನದಲ್ಲಿ ಒಟ್ಟು 28ಕ್ಕೂ ಅಧಿಕ ಜಾತಿಯ ಹಾವುಗಳು ವಾಸಿಸುತ್ತಿವೆ. ಹಾವುಗಳು ಪ್ರತಿ ವರ್ಷ ಬೇಸಿಗೆಯಲ್ಲಿ ಮೊಟ್ಟೆಯನ್ನಿಡುತ್ತವೆ. ಬೇಸಿಗೆ ಮುಕ್ತಾಯ ಆಗುತ್ತಿದ್ದಂತೆಯೇ ಮೇ ಆರಂಭದಿಂದ ಮೊಟ್ಟೆಗಳಿಗೆ ಕಾವು ಸಿಕ್ಕಿದ ಆಧಾರದ ಮೇಲೆ ಮರಿಗಳಾಗುತ್ತವೆ. ವಿಷಕಾರಿಯಾದ ನಾಗರಹಾವು, ಕೊಳಕುಮಂಡಲ, ಉರಿ ಮಂಡಲ ಹಾಗೂ ಕಟ್ಟಹಾವು ಸೇರಿ ಎಲ್ಲ ಬಗೆಯ ಹಾವಿನ ಮರಿಗಳು ಮೇ15 ರವರೆಗೆ ಮೊಟ್ಟೆಯಿಂದ ಹೊರಗೆ ಬಂದು ಬದುಕಲು ಆರಂಭಿಸುತ್ತವೆ.
ಮರಿ ಹಾವುಗಳಿಂದಲೂ ಸಾವು: ದೊಡ್ಡ ಹಾವುಗಳು ಸುಖಾಸುಮ್ಮನೆ ಕಚ್ಚದೆ, ಒಂದೆರಡು ಬಾರಿ ಬುಸುಗುಟ್ಟಿ ಅಥವಾ ಕೆರಳಿ ಹೆದರಿಸುತ್ತವೆ. ತನ್ನ ಮೇಲೆ ದಾಳಿ ಆಗುತ್ತದೆ ಎಂಬುದು ತಿಳಿದರೆ ಮಾತ್ರ ಕಚ್ಚುತ್ತವೆ. ಆದರೆ, ಹಾವಿನ ಮರಿಗಳಿಗೆ ಆಹಾರ ಸ್ಥಳದ ಗುರುತಿಲ್ಲದೆ ಮನೆಯಂಗಳ, ಸಿಮೆಂಟ್ ಆವರಣ, ಕಸದ ಡಬ್ಬಿಗಳು, ನೀರು ಅಥವಾ ಕರೆಂಟ್ನ ಮೀಟರ್ ಬಾಕ್ಸ್ಗಳು, ಮನೆ ಹೊರಗೆ ಶೇಖರಿಸಿಟ್ಟ ಕಟ್ಟಿಗೆ, ಕಲ್ಲುಗಳು, ರಸ್ತೆ, ಗಿಡದ ಕುಂಡಗಳು, ವಾಹನಗಳು ಸೇರಿ ಎಲ್ಲೆಂದರಲ್ಲಿ ಕುಳಿತುಕೊಳ್ಳುತ್ತವೆ. ಮಕ್ಕಳು, ಪಾದಚಾರಿಗಳು ಸವಾರರು ಓಡಾಡುವಾಗ ತಮ್ಮ ಮೇಲೆ ಆಕ್ರಮಣ ವಾಗುತ್ತದೆ ಎಂದು ದಿಢೀರ್ ಕಚ್ಚುತ್ತವೆ. ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಸಾವು ಸಂಭವಿಸುತ್ತದೆ.
ಯಾವ ಪ್ರದೇಶದಲ್ಲಿ ಹಾವು ಹೆಚ್ಚು?: ಬೆಂಗಳೂರು ಉದ್ಯಾನ ನಗರಿಯಾಗಿದ್ದು, ಎಲ್ಲ ಭಾಗ ದಲ್ಲಿಯೂ ಹಾವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ನೀರು, ಹಾಳಿ, ಬೆಳಕು ಹೆಚ್ಚು ಬೀಳದಂತಹ ಉಷ್ಣವಿರುವ ಸ್ಥಳಗಳಲ್ಲಿ ಹಾವು ಮೊಟ್ಟೆಗಳನ್ನಿಡುತ್ತವೆ. ನೀರು ತುಂಬಿ ಹರಿಯದ ಮೋರಿಗಳು, ಖಾಲಿ ನಿವೇಶನಗಳು, ಉದ್ಯಾನಗಳು, ರೈಲ್ವೆ ಹಳಿ, ರಾಜಕಾಲುವೆ ಹರಿಯುವ ಸ್ಥಳ, ಕಸ ತ್ಯಾಜ್ಯ ಸುರಿಯುವ ಸ್ಥಳ, ವಿಶಾಲ ಕೈತೋಟದ ಪಕ್ಕದಲ್ಲಿರುವ ಮನೆಗಳಿಗೆ ಹೆಚ್ಚು ಹಾವುಗಳು ಬರುವ ಸಾಧ್ಯತೆಯಿದೆ. ಇನ್ನು ಕೆರೆ ಪಕ್ಕದಲ್ಲಿನ ಮನೆಗಳು ಹಾಗೂ ತುಂಬ ಕಳೆಯದಾದ ಕಾಲುವೆಗಳಲ್ಲಿ ಹಾವು ಹೆಚ್ಚಾಗಿ ಮರಿ ಮಾಡಿಸುತ್ತವೆ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.
ಹಾವುಗಳ ರಕ್ಷಣೆಗೆ ಸಹಾಯವಾಣಿ: ಹಾವುಗಳು ಕಂಡಾಕ್ಷಣ ಅವುಗಳಿಗೆ ಸೀಮೆಎಣ್ಣೆ, ಬಿಸಿನೀರು ಹಾಕುವುದನ್ನು ಮಾಡಬೇಡಿ. ಅವುಗಳಿರುವ ಸ್ಥಳ ನೋಡಿಕೊಂಡು ದೂರವಾಣಿ ಸಂಖ್ಯೆ 080-22221188 ಹಾಗೂ 99027 94711 ಕರೆ ಮಾಡಿ.
ವಿಷಕಾರಿ ಹಾವುಗಳು ಮೊಟ್ಟೆಯಿಂದ ಹೊರ ಬರುವಾಗಲೇ ವಿಷಪೂರಿತವಾಗಿರುತ್ತವೆ. ಸಣ್ಣದಿದ್ದಾಗ ಮನುಷ್ಯರಿಗೆ ಕಚ್ಚಿದರೂ ಸಾವು ಸಂಭವಿಸುತ್ತದೆ. ಹೀಗಾಗಿ, ಮುಂದಿನ 2ತಿಂಗಳು ಮಕ್ಕಳನ್ನು ಅಂಗಳಕ್ಕೆ ಬಿಡದೆ, ಬರಿಗಾಲಲ್ಲಿ ಹೊರ ಹೋಗದಂತೆ ಜಾಗ್ರತೆವಹಿಸಬೇಕು.
| ಪ್ರಸನ್ನ ವನ್ಯಜೀವಿ ಪರಿಪಾಲಕ