ಮಂಡ್ಯ: ಕಾಂಗ್ರೆಸ್ ಒಂದೊಂದಾಗಿ ಎಲ್ಲ ರಾಜ್ಯಗಳನ್ನೂ ಕಳೆದುಕೊಳ್ಳುತ್ತಿದೆ. ಈಗ ಮೂರ‌್ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಇಂತಹ ಪಕ್ಷಗಳು ಜನರ ಒಳಿತಿನ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನ ಟೀಕಿಸಿದರು.
ನಗರದ ಗುತ್ತಲು ಬಡಾವಣೆಯಲ್ಲಿ 6ನೇ ಮಹಾಕೇಂದ್ರ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಸಾಮಾನ್ಯ ಜನರ ಬಗ್ಗೆ ಯೋಜನೆ ರೂಪಿಸಲು ಚಿಂತಿಸುತ್ತಿದೆ. ಆದ್ದರಿಂದಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಮಂಡ್ಯದಲ್ಲೂ ಬದಲಾವಣೆಯಾಗಿದೆ. ಮನಸ್ಸು ಮಾಡಿದರೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದು. ಬೂತ್ ಸಮಿತಿಯವರು ಕೆಲಸ ಮಾಡಬೇಕಷ್ಟೇ. ನಮ್ಮ ಬೂತ್‌ನಲ್ಲಿ ಒಂದು ಗ್ರೂಪ್ ಮಾಡಿಕೊಂಡು ಆ ಬೂತ್‌ನಲ್ಲಿರುವ ಎಲ್ಲ ವ್ಯಕ್ತಿಗಳನ್ನೂ ಸಂಪರ್ಕ ಮಾಡಿ ಸರ್ಕಾರದ ಯೋಜನೆಗಳನ್ನು ತಿಳಿಸುವ ಕೆಲಸ ಮಾಡಬೇಕು. ಬಳಿಕ ಸ್ಟಿಕ್ಕರ್ ಅಳವಡಿಸುವುದು. ಯಾರೆಲ್ಲ ಸದಸ್ಯರಾಗಿಲ್ಲವೋ ಅಂತಹವರನ್ನು ಸದಸ್ಯರನ್ನಾಗಿ ಮಾಡುವುದು. ಅಕ್ಕಪಕ್ಕದ ಮನೆಯವರನ್ನೂ ಮಾತನಾಡಿಸಿ ಪಕ್ಷಕ್ಕೆ ಸೆಳೆಯುವ ಕೆಲ ಮಾಡಿದರೆ ನಮಗೆ ನೂರಕ್ಕೆ ನೂರು ಮತಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2004ಕ್ಕಿಂತ ಮುನ್ನ ಬ್ಯಾಂಕ್ ಖಾತೆ ಹೊಂದಿದ್ದವರು ಕೆಲವೇ ಜನರು ಇದ್ದರು. ಬ್ಯಾಂಕ್ ಒಳಗೆ ಹೋಗಲೂ ಯೋಗ್ಯತೆ ಇಲ್ಲದಂತೆ ನಮ್ಮನ್ನು ಪರಿಗಣಿಸಿದ್ದರು. ಆದರೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುತ್ತಿದ್ದಂರೆ ಸಾಮಾನ್ಯ ಜನರಿಗೂ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಜನರ ಖಾತೆಗೆ ಒಂದು ಹಾಕದ ಸರ್ಕಾರ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದೆ ಎಂದು ವಿಪಕ್ಷಗಳು ಅಣಕಿಸಿದ್ದವು. ಮುಂದೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಸರ್ಕಾರ ಫಲಾನುಭವಿಗಳಿಗೆ 100 ರೂ ಕೊಟ್ಟರೆ, ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತಿದ್ದುದು ಕೇವಲ 15 ರೂ ಮಾತ್ರ. ಇದನ್ನು ಸ್ವತಃ ರಾಜೀವ್‌ಗಾಂಧಿ ಅವರೇ ಹೇಳಿದ್ದಾರೆ. ಪ್ರತೀ ವರ್ಷ ಮೂರ‌್ನಾಲ್ಕು ಲಕ್ಷ ಕೋಟಿ ರೂಗಳನ್ನು ದಲ್ಲಾಳಿಗಳು ತಿಂದು ಹಾಕುತ್ತಿದ್ದರು. 24 ಲಕ್ಷ ಕೋಟಿ ರೂ ಹಣ ಫಲಾನುಭವಿಗಳಿಗೆ ಹೋಗಬೇಕಿತ್ತು. ಆದರೆ ಶೇ.25ರಷ್ಟು ಅಂದರೆ ಸರಿ ಸುಮಾರು ಏಳೂವರೆ ಲಕ್ಷ ಕೋಟಿ ರೂಗಳನ್ನು ಮಧ್ಯವರ್ತಿಗಳು ತಿಂದು ತೇಗುತ್ತಿದ್ದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲಾಯಿತು. ಇದರಿಂದ ದಲ್ಲಾಳಿಗಳ ಪಾಲಾಗುತ್ತಿದ್ದ ಹಣ ನಿಂತು ಫಲಾನುಭವಿಗಳಿಗೆ ಸಂಪೂರ್ಣ ಹಣ ವರ್ಗಾವಣೆಯಾಗುತ್ತಿದೆ ಎಂದು ವಿವರಿಸಿದರು.
ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ನಗರಸಭಾ ನಾಮನಿರ್ದೇಶಿತ ಸದಸ್ಯ ಹನುಮಂತು, ಪ.ನಾ.ಸುರೇಶ, ಡಾ.ಸದಾನಂದ, ವಿವೇಕ್, ಎಚ್.ಆರ್.ಅರವಿಂದ್, ಚಾಮರಾಜು ಇತರರಿದ್ದರು. ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.